ಸ್ಯಾಂಡಲ್ವುಡ್ನ ಖ್ಯಾತ ಕಲಾವಿದರಾದ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಪೊನ್ನಣ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 24ರಂದು ಇವರಿಬ್ಬರು ಹಸೆ ಮಣೆ ಏರಿಲಿದ್ದಾರೆ. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಈ ಸ್ಟಾರ್ ಜೋಡಿಯ ಮದುವೆ (Bhuvan Ponnanna Marriage) ನಡೆಯಲಿದೆ. ಇಬ್ಬರ ವಿವಾಹದ ಆಮಂತ್ರಣ ಪತ್ರಿಕೆ ಲಭ್ಯವಾಗಿದೆ. ಕೊಡವ ಭಾಷೆಯಲ್ಲಿ ಮಂಗಳ ಪತ್ರ ಮುದ್ರಿಸಲಾಗಿದೆ. ಹಲವು ವರ್ಷಗಳಿಂದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಅವರು ಆಪ್ತವಾಗಿದ್ದರು. ಈಗ ಅವರಿಬ್ಬರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ. ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆಯಲು ಸಜ್ಜಾಗಿರುವ ಹರ್ಷಿಕಾ ಮತ್ತು ಭುವನ್ಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಕೊಡವ ಸಂಪ್ರದಾಯದ ಪ್ರಕಾರ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಕಾರ್ಯಗಳು ನಡೆಯಲಿವೆ. ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಕುಟುಂಬಸ್ಥರು ಮತ್ತು ಆಪ್ತರು ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಲಗ್ನಪತ್ರಿಕೆ ಶಾಸ್ತ್ರ ಸರಳವಾಗಿ ನಡೆದಿದೆ. ಮದುವೆ ಬಗ್ಗೆ ಈ ಜೋಡಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ವಿವಾಹ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್ ಆದ ಬಳಿಕ ಸುದ್ದಿ ಜಗಜ್ಜಾಹೀರಾಗಿದೆ.
ಹರ್ಷಿಕಾ ಪೂಣ್ಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ.
ಇದನ್ನೂ ಓದಿ: ಮಳವಳ್ಳಿ ಬಾಲಕಿಯ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಭೇಟಿ, ಒಟ್ಟಿಗೆ ಹೋರಾಡೋಣ ಅಂತ ಕುಟುಂಬಕ್ಕೆ ಭರವಸೆ!
2008ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹರ್ಷಿಕಾ ಪೂಣ್ಣಚ್ಚ ಅವರು ಈವರೆಗೂ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತಮಿಳು, ಭೋಜ್ಪುರಿ, ತೆಲುಗು, ಕೊಡವ ಮತ್ತು ಕೊಂಕಣಿ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವುದು ಅವರ ಹೆಚ್ಚುಗಾರಿಕೆ. ಭೋಜ್ಪುರಿ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಕನ್ನಡದ ಹಲವು ಖ್ಯಾತ ನಿರ್ದೇಶಕರ ಸಿನಿಮಾಗಳಲ್ಲಿ ಹರ್ಷಿಕಾ ನಟಿಸಿದ್ದಾರೆ. ಸ್ಟಾರ್ ಕಲಾವಿದರ ಜೊತೆ ಅಭಿನಯಿಸಿ ಅವರು ಜನಪ್ರಿಯತೆ ಪಡೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Fri, 30 June 23