2002 ರಲ್ಲಿ ಗುಜರಾತ್, 2023 ರಲ್ಲಿ ಮಣಿಪುರ: ಮೋದಿಗೆ ಕಿಶೋರ್ ಮಾತಿನ ತಿವಿತ
Kishore: ಜನಪ್ರಿಯ ಪೋಷಕನಟ ಕಿಶೋರ್, ಮಣಿಪುರ ಹಿಂಸಾಚಾರ ವಿಷಯವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕನ್ನಡದ ನಟ ಕಿಶೋರ್ (Kishore), ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಹು ಜನಪ್ರಿಯ, ಬೇಡಿಕೆಯ ಪೋಷಕ ನಟ. ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯರಾಗಿರುವ ಕೀಶೋರ್, ಧರ್ಮ ರಾಜಕೀಯದ ಕಡು ವಿರೋಧಿ. ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ದಾಖಲಿಸುತ್ತಲೇ ಬಂದಿರುವ ಕಿಶೋರ್ ಇದೀಗ ಮಣಿಪುರ ಹಿಂಸಾಚಾರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಕಟು ಶಬ್ದಗಳಲ್ಲಿ ಟೀಕಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
”ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್. ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆಸ್ನ್ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು? ನೂರ ನಲವತ್ತು ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002 ರಲ್ಲಿ ಗುಜರಾತ್ 2023 ರಲ್ಲಿ ಮಣಿಪುರ .. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ. ಇತಿಹಾಸಕ್ಕೆ ಮರೆವಿಲ್ಲ ನೆನಪಿರಲಿ” ಎಂದು ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Actor Kishore: ಒಡಿಶಾ ರೈಲು ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಖ್ಯಾತ ನಟ ಕಿಶೋರ್
ಮಣಿಪುರ ಹಿಂಸಾಚಾರದ ಬಗ್ಗೆ ನಟ ಕಿಶೋರ್ ಬರೆಯುತ್ತಿರುವುದು ಇದು ಮೊದಲೇನೂ ಅಲ್ಲ, ಕೆಲವು ದಿನಗಳ ಹಿಂದೆ, ”ಒಂದು ಕರೆಯಲ್ಲಿ ಯುಕ್ರೇನ್ ಯುದ್ಧ ನಿಲ್ಲಿಸಿದವೆಂದು ಬಡಾಯಿ ಕೊಚ್ಚುವ ಜನ , ಮಣಿಪುರವನ್ನು ತಿಂಗಳಿಂದ ಹೊತ್ತಿ ಉರಿಯಲು ಬಿಟ್ಟದ್ದೇಕೆ. ಲಾಭ ಲಾಭ ಲಾಭ, ಎಲ್ಲದರಲ್ಲೂ ಲಾಭ. ಪಾಪದ ಜನರ ಸಾವಿನಲ್ಲೂ ಲಾಭದ ಧಂದೆ ಮಾಡುವ ವ್ಯಾಪಾರಿಯ ಕೈಗೆ ದೇಶ ಕೊಟ್ಟಂತಾಯ್ತು. ಜನ ಸಾಯುತ್ತಲೇ ಇರಲಿ ಗುಜರಾತಿನಲ್ಲೊ, ಪುಲ್ವಾಮದಲ್ಲೊ, ಒಡಿಸ್ಸಾದಲ್ಲೊ, ಮಣಿಪುರದಲ್ಲೊ, ದೇಶದ ಮೂಲೆ ಮೂಲೆಯಲ್ಲಿ ಹಿಂಸೆಯ ರೋಗವನ್ನು ಹರಡಿ ಲಾಭ ಹೆಕ್ಕುತ್ತಲೇ ಇರುತ್ತಾರೆ ದ್ವೇಷದ ವ್ಯಾಪಾರಿಗಳು, ಯಾರೂ ಪ್ರಶ್ನಿಸಬೇಡಿ .. ಪತ್ರಿಕೆ ಯಾದರೂ ಸರಿ ಟ್ವಿಟರ್ ನಲ್ಲಾದರೂ ಸರಿ, ತುಮ್ ಬಸ್ ಚುಪ್ ರಹೋ ಯೇ ಉನ್ ಕೀ ಮನ್ ಕೀ ಬಾತ್ ಹೈ” ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಅದಕ್ಕೂ ಮುನ್ನ ಇದೇ ಮಣಿಪುರ ಹಿಂಸಾಚಾರ ವಿಷಯವಾಗಿ, ”ಒಡೆದು ಆಳುವ ಹೊಲಸು ರಾಜಕೀಯದ ಪ್ರತಿಫಲ. ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು ಇನ್ನೂರಕ್ಕೂ ಹೆಚ್ಚು ಚರ್ಚುಗಳು ದೇವಾಲಯಗಳು ಭಸ್ಮ , 80ಕ್ಕೂ ಹೆಚ್ಚು ಜನಗಳ ಹತ್ಯೆ, ಎರಡು ಸಾವಿರ ಸರ್ಕಾರಿ ಶಸ್ತ್ರಗಳ ಲೂಟಿ ದುರಂತ ಮಣಿಪುರ ಒಂದು ಉದಾಹರಣೆ. ದೇಶವೇ ಎಚ್ಚರ” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು ಕಿಶೋರ್.
ಮಣಿಪುರ ಹಿಂಸಾಚಾರ ಮಾತ್ರವೇ ಅಲ್ಲದೆ, ಕುಸ್ತಿ ಪಟುಗಳು ಪ್ರತಿಭಟನೆ, ಅದಾನಿ ಹಾಗೂ ಹಿಂಡನ್ಬರ್ಗ್ ಪ್ರಕರಣ, ಅಮೂಲ್ ವಿವಾದ ಇನ್ನೂ ಹಲವು ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಕಿಶೋರ್ ಟೀಕಿಸುತ್ತಾ ಬರುತ್ತಿದ್ದಾರೆ. ಉರಿಗೌಡ ನಂಜೇಗೌಡ ವಿವಾದದ ಬಗ್ಗೆಯೂ ಕೀಶೋರ್ ಮಾತನಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Fri, 30 June 23