‘ಆಲ್ಫಾ’ ಸಿನಿಮಾದ ‘ರಾವ ರಾವ’ ಕಲರ್​ಫುಲ್ ಹಾಡಿಗೆ ಅನೂಪ್ ಸೀಳಿನ್ ಸಂಗೀತ

ಹೇಮಂತ್‌ ಕುಮಾರ್ ಅಭಿನಯದ, ವಿಜಯ್ ನಿರ್ದೇಶನದ ‘ಆಲ್ಫಾ’ ಸಿನಿಮಾದಿಂದ ಹಾಡು ರಿಲೀಸ್ ಆಗಿದೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ‘ಎಲ್​ಎ’ ಬ್ಯಾನರ್‌ ಮೂಲಕ ಸಿನಿಮಾ ನಿರ್ಮಾಣ ಆಗುತ್ತಿದೆ. ಹೊಸ ಹಾಡಿಗೆ ಅನೂರಾಗ ಕುಲಕರ್ಣಿ ಧ್ವನಿ ನೀಡಿದ್ದಾರೆ. ಹಾಡಿನಲ್ಲಿ ಹೇಮಂತ್ ಅವರ ಡ್ಯಾನ್ಸ್ ಗಮನ ಸೆಳೆದಿದೆ.

‘ಆಲ್ಫಾ’ ಸಿನಿಮಾದ ‘ರಾವ ರಾವ’ ಕಲರ್​ಫುಲ್ ಹಾಡಿಗೆ ಅನೂಪ್ ಸೀಳಿನ್ ಸಂಗೀತ
Alpha Men Love Vengeance Movie Still

Updated on: Dec 30, 2025 | 3:46 PM

ನಿರ್ದೇಶಕ ವಿಜಯ್ ಅವರು ಈ ಮೊದಲು ‘ಗೀತಾ’ ಮತ್ತು ‘ಹೊಯ್ಸಳ’ ಸಿನಿಮಾಗಳನ್ನು ಮಾಡಿದ್ದರು. ಈಗ ಅವರು ‘ಆಲ್ಫಾ’ (Alpha) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಆಲ್ಫಾ – ಮೆನ್ ಲವ್ ವೆಂಜೆನ್ಸ್’ (Alpha Men Love Vengeance) ಎಂಬುದು ಈ ಸಿನಿಮಾದ ಪೂರ್ತಿ ಟೈಟಲ್. ಈ ಸಿನಿಮಾದಿಂದ ಈಗೊಂದು ಹೊಸ ಹಾಡು ಬಿಡುಗಡೆ ಆಗಿದೆ. ‘ರಾವ ರಾವ’ ಎಂಬ ಈ ಹಾಡನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ. ತುಂಬ ಕಲರ್​​ಫುಲ್ ಆಗಿ ಈ ಹಾಡು ಮೂಡಿಬಂದಿದೆ. ಹಾಡಿನ ಬಿಡುಗಡೆ ಬಳಿಕ ‘ಆಲ್ಫಾ’ ಸಿನಿಮಾ ಮೇಲಿನ ಕೌತುಕ ಹೆಚ್ಚಿದೆ.

‘ಆಲ್ಫಾ’ ಸಿನಿಮಾದಲ್ಲಿ ನಾಯಕನಾಗಿ ಹೇಮಂತ್‌ ಕುಮಾರ್ ಅವರು ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಸಿನಿಮಾದ ಮೊದಲ ಹಾಡು ‘ರಾವ ರಾವ..’ ಬಿಡುಗಡೆ ಆಗಿ ಜನಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿಗೆ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಅನೂರಾಗ ಕುಲಕರ್ಣಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

 ‘ರಾವ ರಾವ’ ಹಾಡು:

ಈ ಮೊದಲು ‘ಆಲ್ಫಾ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಇದು ಆ್ಯಕ್ಷನ್ ಜೊತೆಗೆ ಅಪ್ಪ-ಮಗನ ಭಾವನಾತ್ಮಕ ಕಥೆ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾ ಮೂಲಕ ಹೇಮಂತ್ ಕುಮಾರ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಸಿನಿಮಾ ಬಗ್ಗೆ ನಿರ್ದೇಶಕ ವಿಜಯ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಆ್ಯಕ್ಷನ್ ಮತ್ತು ಕ್ರೈಂನ ಭಯಾನಕತೆ ಎಷ್ಟಿರುತ್ತದೆ ಎಂಬುದು ಸಿನಿಮಾದ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದೆ. ಸಿನಿಮಾದಲ್ಲಿ 3 ಪಾತ್ರಗಳು ಪ್ರಮುಖವಾಗಿ ಬರಲಿವೆ’ ಎಂದು ಅವರು ಹೇಳಿದ್ದಾರೆ. ಆನಂದ್ ಕುಮಾರ್ ಅವರು ನಿರ್ಮಾಪಕರಾಗಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಇದನ್ನೂ ಓದಿ: ‘ಆಲ್ಫಾ’ ಸಿನಿಮಾ ಫಸ್ಟ್ ಲುಕ್; ಹೀರೋ ಆದ ಹೇಮಂತ್ ಕುಮಾರ್

ನಟ ಹೇಮಂತ್ ಕುಮಾರ್ ಅವರು ‘ಆಲ್ಫಾ’ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದಾರೆ. ರಾಘು ಶಿವಮೊಗ್ಗ ಬಳಿ ಅವರು ನಟನೆಯ ತಯಾರಿ ನಡೆಸಿದ್ದಾರೆ. ಅರ್ಜುನ್ ಜೊತೆ ಸಾಹಸ ಅಭ್ಯಾಸ ಮಾಡಿದ್ದಾರೆ. ಅಲ್ಲದೇ, ಡ್ಯಾನ್ಸ್ ಮತ್ತು ಮಾರ್ಷಲ್ ಆರ್ಟ್ ಕಲಿತು ಹೀರೋ ಆಗಲು ಬೇಕಾದ ಪೂರ್ತಿ ತಯಾರಿ ಮಾಡಿಕೊಂಡು ಎಂಟ್ರಿ ನೀಡಿದ್ದಾರೆ. ಕಾರ್ತಿಕ್ ಛಾಯಾಗ್ರಹಣ ಮಾಡಿರುವ ಈ ಸಿನಿಮಾಗೆ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ನಾಯಕಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.