
ನಿರ್ದೇಶಕ ವೆಂಕಟ್ ಭಾರದ್ವಾಜ್ (Venkat Bharadwaj) ಅವರು ‘ಹೇ ಪ್ರಭು’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ‘ಎದ್ದೇಳೋ ಈಗ..’ ಎಂಬ ಈ ಹಾಡಿನಲ್ಲಿ ಸ್ಫೂರ್ತಿದಾಯಕ ಸಾಲುಗಳು ಇವೆ. ತೇಜಸ್ವಿ ಹರಿದಾಸ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ಈ ಹಾಡು ಪ್ರತಿಬಿಂಬಿಸುತ್ತದೆ ಎಂದು ‘ಹೇ ಪ್ರಭು’ (Hey Prabhu) ಚಿತ್ರತಂಡ ಹೇಳಿದೆ. ಅರಸು ಅಂತಾರೆ ಅವರು ‘ಎದ್ದೇಳೋ ಈಗ..’ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಡ್ಯಾನಿ ಆಂಡರ್ಸನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
‘ಹೇ ಪ್ರಭು’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಜಯವರ್ಧನ್, ಸಂಹಿತಾ ವಿನ್ಯ, ಗಜಾನನ ಹೆಗ್ಡೆ, ಯಮುನಾ ಶ್ರೀನಿಧಿ, ಲಕ್ಷ್ಮಣ ಶಿವಶಂಕರ, ಡಾ. ಪ್ರಮೊದ್, ಹರಿ ಧನಂಜಯ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ‘ಅಮೃತ ಫಿಲ್ಮ್ ಸೆಂಟರ್’ ಮತ್ತು ‘24 ರೀಲ್ಸ್’ ಸಂಸ್ಥೆಗಳ ಜೊತೆಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.
ಡಾ. ಸುಧಾಕರ್ ಶೆಟ್ಟಿ ಅವರು ‘ಹೇ ಪ್ರಭು’ ಸಿನಿಮಾವನ್ನು ಪ್ರಸ್ತುತಪಡಿಸಿದ್ದಾರೆ. ನೈಜ ಘಟನೆಯ ಆಧಾರಿಸಿ ಈ ಸಿನಿಮಾ ಸಿದ್ಧವಾಗಿದೆ. ಒಂದು ಜಾಗತಿಕ ಸಮಸ್ಯೆಯ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದೆ. ಔಷಧ ಕಂಪನಿಗಳ ನಿಯಂತ್ರಣರಹಿತ ಪ್ರಭಾವ ಮತ್ತು ಲಾಲಸೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಇತ್ತೀಚಿಗೆ ಚರ್ಚೆಗೆ ಬಂದ ಮಕ್ಕಳ ಕೆಮ್ಮಿನ ಸಿರಪ್ ವಿವಾದದ ಹಿನ್ನೆಲೆಯಲ್ಲಿ ಈ ಸಿನಿಮಾ ಪ್ರಸ್ತುತ ಎನಿಸುಕೊಳ್ಳುತ್ತದೆ ಎಂದು ಚಿತ್ರತಂಡ ಹೇಳಿದೆ.
ಶಮೀಕ್ ವಿ. ಭರದ್ವಾಜ ಅವರು ಸಂಕಲನ ಮಾಡಿದ್ದಾರೆ. ಲಕ್ಷ್ಮಣ್ ಶಿವಶಂಕರ್, ಪ್ರವೀಣ್, ವೆಂಕಟ್ ಭಾರದ್ವಾಜ್ ಅವರು ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಭಾರತೀಯ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಲಾರೆನ್ಸ್ ಪ್ರೀತಮ್ ರವರ ಸಹ ನಿರ್ದೇಶನ ಈ ಸಿನಿಮಾಗಿದೆ. ‘ಈ ಚಿತ್ರವು ಭಾರತದ ಜನರ ಪರವಾಗಿ ಮಾತನಾಡುತ್ತದೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.