ದರ್ಶನ್​ಗೆ ಜಾಮೀನು ನೀಡಲು ಹೈಕೋರ್ಟ್ ಪರಿಗಣಿಸಿದ ಪ್ರಮುಖ ಅಂಶಗಳು ಇಲ್ಲಿವೆ

| Updated By: ಮದನ್​ ಕುಮಾರ್​

Updated on: Dec 13, 2024 | 8:06 PM

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ದರ್ಶನ್, ಪವಿತ್ರಾ ಗೌಡ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಬೇಲ್​ ನೀಡಲು ಹೈಕೋರ್ಟ್​ ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸಿದೆ. ಗ್ರೌಂಡ್ಸ್ ಆಫ್ ಅರೆಸ್ಟ್ ಬಗ್ಗೆ ಹೈಕೋರ್ಟ್ ಹೆಚ್ಚಿನ ಒತ್ತು ನೀಡಿದೆ. ಅರ್ಹತೆ ಆಧರಿಸಿ ಜಾಮೀನು ಮಂಜೂರು ಮಾಡಲಾಗಿದೆ.

ದರ್ಶನ್​ಗೆ ಜಾಮೀನು ನೀಡಲು ಹೈಕೋರ್ಟ್ ಪರಿಗಣಿಸಿದ ಪ್ರಮುಖ ಅಂಶಗಳು ಇಲ್ಲಿವೆ
ದರ್ಶನ್​
Follow us on

ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜಾಮೀನು ನೀಡಲಾಗಿದೆ. ಆದೇಶದ ಪ್ರತಿ ಟಿವಿ9ಗೆ ಲಭ್ಯವಾಗಿದೆ. ನ್ಯಾಯಾಲಯ ಪರಿಗಣಿಸಿದ ಪ್ರಮುಖ ಅಂಶಗಳ ಬಗ್ಗೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ದರ್ಶನ್ ಸೇರಿದಂತೆ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆಯಿಲ್ಲ. ಕಳೆದ ಆರು ತಿಂಗಳಿನಿಂದ ಬಂಧನದಲ್ಲಿದ್ದಾರೆ. ಈ ಕೇಸಿನಲ್ಲಿ 262 ಸಾಕ್ಷಿಗಳಿದ್ದಾರೆ. 587 ದಾಖಲೆ ಸಲ್ಲಿಸಿದ್ದಾರೆ. ಹೀಗಾಗಿ ಸಾಕ್ಷ್ಯ ವಿಚಾರಣೆ ಮುಗಿಯುವುದು ವಿಳಂಬವಾಗಲಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವಾಗ ಲಿಖಿತ ಕಾರಣ ಒದಗಿಸಬೇಕು. ಆದರೆ ಆರೋಪಿಗಳಿಗೆ ಒಂದೇ ಮಾದರಿಯ ಕಾರಣಗಳನ್ನು ನೀಡಲಾಗಿದೆ. ಪ್ರಬೀರ್ ಪುರಕಾಯಸ್ತ ಕೇಸ್​ನಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಿಲ್ಲ ಎಂಬಿತ್ಯಾದಿ ಅಂಶಗಳನ್ನು ಹೈಕೋರ್ಟ್​ ಪರಿಗಣಿಸಿದೆ.

ಸಿಆರ್​ಪಿಸಿ ಸೆ.50(1) ಹಾಗೂ ಸಂವಿಧಾನದ ವಿಧಿ 22(1) ಅನ್ನು ಪಾಲಿಸಿಲ್ಲ. ಪ್ರತಿಯೊಬ್ಬ ಆರೋಪಿಗೂ ಪ್ರತ್ಯೇಕ ಕಾರಣಗಳನ್ನು ಒದಗಿಸಬೇಕು. ಅರೆಸ್ಟ್ ಮೆಮೋಗೆ ಸಹಿ ಮಾಡಿದ ಸಾಕ್ಷಿಗಳು ತಮ್ಮ ಹೇಳಿಕೆಯಲ್ಲಿ ಇದನ್ನು ಉಲ್ಲೇಖಿಸಿಲ್ಲ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಬಗ್ಗೆ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖವಿಲ್ಲ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯಲ್ಲಿ ವಿರೋಧಾಭಾಸಗಳಿವೆ.

ಆರೋಪಿ 12, 13ರ ಅರೆಸ್ಟ್ ಮೆಮೋಗೆ ಜೂನ್ 11ರಂದೇ ಸಾಕ್ಷಿ ಸಹಿ ಹಾಕಿದ್ದಾನೆ. ಆದರೆ ಈತನ ಹೇಳಿಕೆಯನ್ನು ವಿಳಂಬವಾಗಿ ದಾಖಲಿಸಲಾಗಿದೆ. ವಿಳಂಬಕ್ಕೆ ವಿವರಣೆಯನ್ನು ಎರಡು ತಿಂಗಳ ನಂತರ ದಾಖಲಿಸಲಾಗಿದೆ. ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ ವಸ್ತುಗಳನ್ನು ಕೊಲೆ ಉದ್ದೇಶಕ್ಕೆ ಸಂಗ್ರಹಿದ್ದರು ಎನ್ನಲಾಗುವುದಿಲ್ಲ. ಕೊಲೆಯ ಉದ್ದೇಶಕ್ಕೆ ರೇಣುಕಾಸ್ವಾಮಿಯನ್ನು ಕರೆತರಲಾಗಿತ್ತಾ ಎಂಬುದು ವಿಸ್ತೃತ ಸಾಕ್ಷ್ಯ ವಿಚಾರಣೆ ಬಳಿಕವಷ್ಟೇ ಅಂತಿಮ ನಿರ್ಣಯಕ್ಕೆ ಬರಬಹುದು. ಆರು ಸಾಕ್ಷಿಗಳು ಷೆಡ್​ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಹೇಳಿಕೆ ದಾಖಲಿಸಲು ವಿಳಂಬವಾಗಿದೆ. ‌ಅಪಹರಣ, ಕೊಲೆಯ ಒಳಸಂಚಿನ ಬಗ್ಗೆ ಸಾಕ್ಷಿಗಳ ಹೇಳಿಕೆ ಇಲ್ಲ.

ಬಟ್ಟೆಗಳಲ್ಲಿ ರಕ್ತದ ಕಲೆ, ಮೊಬೈಲ್ ಸಿಡಿಆರ್ ವಿವರ ಇತ್ಯಾದಿಗಳ‌ ಬಗ್ಗೆ ಸಾಕ್ಷ್ಯ ವಿಚಾರಣೆ ಬಳಿಕವಷ್ಟೇ ನಿರ್ಣಯ ಸಾಧ್ಯ. ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಾಗಿಲ್ಲದಿದ್ದರೆ ಜಾಮೀನು ನೀಡಬಹುದು. ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ತ ಕೇಸಿನಲ್ಲಿ ತೀರ್ಪು ನೀಡಿದೆ. ದರ್ಶನ್, ಪವಿತ್ರಾ ಗೌಡ,‌ ನಾಗರಾಜು, ಲಕ್ಷ್ಮಣ್, ಪ್ರದೂಷ್ ಅವರನ್ನು ಜೂ.11ರಂದು ಬಂಧಿಸಲಾಗಿದೆ. ಆದರೆ ಬಂಧನದ ವೇಳೆಯೇ ಲಿಖಿತ ಕಾರಣ ನೀಡಿರುವ ಉಲ್ಲೇಖವಿಲ್ಲ. ಕೋರ್ಟ್ ಆರ್ಡರ್ ಷೀಟ್​ನಲ್ಲಿ ಗ್ರೌಂಡ್ಸ್ ಆಫ್ ಅರೆಸ್ಟ್ ಉಲ್ಲೇಖವಿಲ್ಲ. ಅರೆಸ್ಟ್ ಮೆಮೋ, ಚೆಕ್ ಲಿಸ್ಟ್ ಬಗ್ಗೆ ಮಾತ್ರ ಉಲ್ಲೇಖವಿದೆ. ಗ್ರೌಂಡ್ಸ್ ಆಫ್ ಅರೆಸ್ಟ್​ಗೆ ಸಹಿ ಮಾಡಿದವರ ಹೇಳಿಕೆ ಪಡೆಯಲಾಗಿದೆ. ಆದರೆ ಬಂಧನದ ವೇಳೆ ತಾವಿದ್ದಿದ್ದಾಗಿ ಕೆಲ ಸಾಕ್ಷಿಗಳು ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ

ಗ್ರೌಂಡ್ಸ್ ಆಫ್ ಅರೆಸ್ಟ್ ಬಗ್ಗೆ ಸಾಮಾನ್ಯ ನಮೂನೆ ನಿಗದಿಪಡಿಸಬೇಕು. ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಬಂಧಿತರಾದವರಿಗೆ ಬಂಧನದ ಲಿಖಿತ ಕಾರಣಗಳನ್ನು ಒದಗಿಸಬೇಕು. ಇದರ ಪ್ರತಿಯನ್ನು ರಿಮಾಂಡ್ ಅರ್ಜಿಯೊಂದಿಗೆ ಕೋರ್ಟ್​ಗೆ ನೀಡಬೇಕು. ಈ ನಿಯಮಗಳ ಪಾಲನೆ ಬಗ್ಗೆ ಮ್ಯಾಜಿಸ್ಟ್ರೇಟ್ ನಮೂದಿಸಬೇಕು. ವಿಚಾರಣಾ ಕೋರ್ಟ್​ಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 1 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ, ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತದ್ದೇ ಬೇರೆ ಕೃತ್ಯಗಳಲ್ಲಿ ಭಾಗಿಯಾಗಬಾರದು. ಕೋರ್ಟ್ ಅನುಮತಿಯಿಲ್ಲದೆ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳಬಾರದು. ಈ ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ನೀಡಿದೆ. ‌

ಸರ್ಜರಿ ಕಾರಣಕ್ಕೆ ಮಧ್ಯಂತರ ಜಾಮೀನು ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಬಿಜಿಎಸ್ ಆಸ್ಪತ್ರೆಯ 4 ವೈದ್ಯಕೀಯ ವರದಿಗಳ ಉಲ್ಲೇಖವಿದೆ. ದರ್ಶನ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆಂದು ವೈದ್ಯರ ವರದಿ ಇದೆ. ಸರ್ಜರಿ ಅಗತ್ಯವೆಂಬ ಬಳ್ಳಾರಿ ವೈದ್ಯರ ವರದಿಯನ್ನು ಬಿಜಿಎಸ್ ವೈದ್ಯರು ದೃಢಪಡಿಸಿದ್ದಾರೆ. ಸರ್ಜರಿಗಾಗಿ ದರ್ಶನ್ ಅವರನ್ನು ಸಿದ್ದಪಡಿಸಲಾಗುತ್ತಿದೆ ಎಂದು ವರದಿ ನೀಡಿದ್ದಾರೆ. ದರ್ಶನ್ ವೈದ್ಯಕೀಯ ಪರಿಸ್ಥಿತಿಯನ್ನು ಈ ಹಂತದಲ್ಲಿ ಸಂದೇಹಿಸಲು ಕಾರಣಗಳಿಲ್ಲ. ರೆಗ್ಯುಲರ್ ಜಾಮೀನಿಗೂ, ವೈದ್ಯಕೀಯ ಕಾರಣದ ಜಾಮೀನಿಗೂ ವ್ಯತ್ಯಾಸವಿದೆ. ಕೋರ್ಟ್​ಗೆ ತಪ್ಪು ಮಾಹಿತಿ ನೀಡಿದ್ದರೆ ಪರಿಣಾಮ ಎದುರಿಸಬೇಕು. ಕಾನೂನಿನ ಹಾದಿಯಲ್ಲಿಯೇ ಪರಿಣಾಮ ಎದುರಿಸಬೇಕೆಂದು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ‌ಅಂತಿಮವಾಗಿ ಅರ್ಹತೆ ಆಧರಿಸಿ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.