‘ಆ ಹಾಲಿವುಡ್ ನನ್ ಮಕ್ಳು ಯಾರ್ಯಾರಿಗೋ ಆಸ್ಕರ್ ಕೊಡ್ತಾರೆ. ಆದರೆ, ಡಿ ಬಾಸ್ ದರ್ಶನ್ಗೆ ಆಸ್ಕರ್ ಕೊಡಬೇಕು’- ಹೀಗೆ ಹೇಳಿದ್ದು ಬೇರಾರು ಅಲ್ಲ ರಾಬರ್ಟ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ರವಿಶಂಕರ್. ರಾಬರ್ಟ್ ಸಕ್ಸಸ್ ಮೀಟ್ ವೇದಿಕೆಯಲ್ಲಿ ಅವರು ಹೀಗೊಂದು ಬೇಡಿಕೆ ಇಟ್ಟರು. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಾಬರ್ಟ್ ಸಿನಿಮಾ ಕೇವಲ 6 ದಿನಕ್ಕೆ 60 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡು ಮುನ್ನುಗ್ಗುತ್ತಿದೆ. ಇದೇ ಖುಷಿಗೆ ರಾಬರ್ಟ್ ಚಿತ್ರತಂಡ ಖಾಸಗಿ ಹೋಟೆಲ್ ಒಂದರಲ್ಲಿ ಸಕ್ಸಸ್ ಮೀಟ್ ನಡೆಸಿತ್ತು. ಈ ವೇಳೆ ರವಿಶಂಕರ್ ವೇದಿಕೆ ಹತ್ತಿ ಮಾತನಾಡುವಾಗ ಈ ಬೇಡಿಕೆ ಇಟ್ಟರು.
ರಾಬರ್ಟ್ ಹಿಟ್ ಆಗೋಕೆ ಪ್ರೇಕ್ಷಕರು ಮೊದಲು ಕಾರಣ. ನಿಮಗೆ ನಾನು ಮೊದಲು ಧನ್ಯವಾದ ಹೇಳಬೇಕು. ಎರಡನೆಯದಾಗಿ ನಾನು ಥ್ಯಾಂಕ್ಸ್ ಹೇಳಬೇಕಾಗಿದ್ದು ನಿರ್ದೇಶಕ ತರುಣ್ ಸುಧೀರ್ಗೆ. ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬರೋಕೆ ಅವರ ಪರಿಶ್ರಮ ಸಾಕಷ್ಟಿದೆ. ನಾವು ಎಲ್ಲೆಲ್ಲಿ ಕ್ಲ್ಯಾಪ್ಸ್ ಬೀಳುತ್ತದೆ ಅಂದುಕೊಂಡಿದ್ದೆವೋ ಅಲ್ಲೆಲ್ಲವೂ ಪ್ರೇಕ್ಷಕರಿಂದ ಚಪ್ಪಾಳೆ ಬಿದ್ದಿದೆ. ರಾಬರ್ಟ್ ಸಕ್ಸಸ್ ಆಗೋದಕ್ಕೆ ನಿರ್ಮಾಪಕರೂ ಕಾರಣ ಎಂದು ಖುಷಿ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ದರ್ಶನ್ ಅವರ ಬಗ್ಗೆ ಮಾತನಾಡಲು ರವಿಶಂಕರ್ ಮರೆತಿಲ್ಲ. ಸಿನಿಮಾದ ಮುಖ್ಯರುವಾರಿ ಡಿ ಬಾಸ್. ಅವರಿಗೆ ನಾನು ಎಷ್ಟು ಬಾರಿ ಧನ್ಯವಾದ ಹೇಳಿದರೂ ಸಾಕಾಗದು ಎಂದರು ರವಿಶಂಕರ್. ಈ ವೇಳೆ, ಆ ಹಾಲಿವುಡ್ ನನ್ ಮಕ್ಳು ಯಾರ್ಯಾರಿಗೋ ಆಸ್ಕರ್ ಕೊಡುತ್ತಾರೆ. ನಿಜವಾಗಿಯೂ ಅವರು ಅವಾರ್ಡ್ ನೀಡಬೇಕಾಗಿದ್ದು ದರ್ಶನ್ಗೆ ಎಂದರು. ರಶವಿಶಂಕರ್ ಹೀಗೆ ಹೇಳೋಕೂ ಒಂದು ಕಾರಣ ಇದೆ. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡನ್ನೂ ತುಂಬಾನೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದನ್ನು ನೋಡಿ ಸಿನಿಮಾದಲ್ಲಿ ಹೀಗೆ ಹೇಳುತ್ತಾರೆ.
ಈ ಹಿಂದೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್ ಅವರು ರಾಬರ್ಟ್ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್ ಅವರು ಹೊಸ ಕಥೆ ಬರೆದು ‘ರಾಬರ್ಟ್’ ಸಿನಿಮಾ ಮಾಡಿದ್ದರು. ಆಶಾ ಭಟ್ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ರವಿಶಂಕರ್, ಸೋನಲ್ ಮೊಂಥೆರೋ, ಚಿಕ್ಕಣ್ಣ, ಅವಿನಾಶ್, ದೇವರಾಜ್, ಶಿವರಾಜ್ ಕೆ.ಆರ್. ಪೇಟೆ, ಐಶ್ವರ್ಯಾ ಪ್ರಸಾದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Puneeth Rajkumar Birthday: ಪುನೀತ್ ಜನ್ಮದಿನಕ್ಕೆ ಶುಭಕೋರಿದ ದರ್ಶನ್-ಸುದೀಪ್! ಅಪ್ಪುಗೆ ಶುಭಾಶಯಗಳ ಸುರಿಮಳೆ