ಹಾಲಿವುಡ್​ಗೆ ರಿಮೇಕ್​ ಆಗಲಿದೆ ರವಿಚಂದ್ರನ್​ ನಟನೆಯ ಸಿನಿಮಾ; ಯಾವುದು ಗೊತ್ತಾ?

|

Updated on: Feb 29, 2024 | 12:37 PM

ಭಾರತದಿಂದ ನೇರವಾಗಿ ಹಾಲಿವುಡ್​ಗೆ ರಿಮೇಕ್​ ಆಗಲಿರುವ ಮೊದಲ ಚಿತ್ರ ಎಂಬ ಖ್ಯಾತಿ ಈ ಸಿನಿಮಾಗೆ ಸಿಗುತ್ತಿದೆ. ಎಲ್ಲ ದೇಶಗಳಿಗೂ ಈ ಚಿತ್ರದ ಕಥೆ ಅನ್ವಯ ಆಗುತ್ತದೆ. ಇದರಲ್ಲಿನ ಸಸ್ಪೆನ್ಸ್​ ಅಂಶವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಹಾಗಾಗಿ ‘ದೃಶ್ಯಂ’ ಚಿತ್ರಕ್ಕೆ ಈ ಪರಿ ಬೇಡಿಕೆ ಇದೆ. ಈಗಾಗಲೇ ಅನೇಕ ಭಾಷೆಗಳಿಗೆ ರಿಮೇಕ್​ ಆಗಿರುವ ಈ ಚಿತ್ರವನ್ನು ಇಂಗ್ಲಿಷ್​ ಪ್ರೇಕ್ಷಕರಿಗೆ ತಲುಪಿಸಲು ಸಿದ್ಧತೆ ನಡೆಯುತ್ತಿದೆ.

ಹಾಲಿವುಡ್​ಗೆ ರಿಮೇಕ್​ ಆಗಲಿದೆ ರವಿಚಂದ್ರನ್​ ನಟನೆಯ ಸಿನಿಮಾ; ಯಾವುದು ಗೊತ್ತಾ?
ರವಿಚಂದ್ರನ್​
Follow us on

ಹಾಲಿವುಡ್​ನಿಂದ ಸ್ಫೂರ್ತಿ ಪಡೆದು ಅನೇಕ ಸಿನಿಮಾಗಳನ್ನು ಭಾರತದಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ ಭಾರತದ ಸಿನಿಮಾಗಳನ್ನು ನೇರವಾಗಿ ಹಾಲಿವುಡ್​ನಲ್ಲಿ (Hollywood) ರಿಮೇಕ್​ ಮಾಡಿದ ಉದಾಹರಣೆ ಇಲ್ಲ. ಈಗ ಭಾರತದ ‘ದೃಶ್ಯಂ’ ಚಿತ್ರವನ್ನು (Drishyam Movie) ಇಂಗ್ಲಿಷ್​ನಲ್ಲಿ ರಿಮೇಕ್​ ಮಾಡಲು ಪ್ಲ್ಯಾನ್​ ಸಿದ್ಧವಾಗಿದೆ. ಅದಕ್ಕಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್​ ಆಗಿದೆ. ಮಲಯಾಳಂ, ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಕನ್ನಡದ ರಿಮೇಕ್​ ಆಗಿ ಮೂಡಿಬಂದ ‘ದೃಶ್ಯ’ ಸಿನಿಮಾದಲ್ಲಿ ರವಿಚಂದ್ರನ್​ (Ravichandran) ಪ್ರಮುಖ ಪಾತ್ರ ಮಾಡಿದರು. ಇಂಗ್ಲಿಷ್​​ನಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕು.

ಇದು ಮೂಲ ಮಲಯಾಳಂ ಭಾಷೆಯ ಸಿನಿಮಾ. ಮೋಹನ್​ಲಾಲ್​, ಮೀನಾ ಮುಂತಾದವರು ನಟಿಸಿದ ‘ದೃಶ್ಯಂ’ ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಬಳಿಕ ಇದೇ ಸಿನಿಮಾವನ್ನು ಕನ್ನಡಕ್ಕೆ (ದೃಶ್ಯ 2014) ರಿಮೇಕ್​ ಮಾಡಲಾಯಿತು. ಅದೇ ವರ್ಷ ತೆಲುಗಿನಲ್ಲಿ ಹಾಗೂ 2015ರಲ್ಲಿ ಹಿಂದಿಗೆ ‘ದೃಶ್ಯಂ’ ಶೀರ್ಷಿಕೆಯಲ್ಲೇ ರಿಮೇಕ್​ ಆಯಿತು. ಟಾಲಿವುಡ್​ನಲ್ಲಿ ದಗ್ಗುಬಾಟಿ ವೆಂಕಟೇಶ್​ ಹಾಗೂ ಹಿಂದಿಯಲ್ಲಿ ಅಜಯ್​ ದೇವಗನ್​ ಅವರು ಮುಖ್ಯ ಪಾತ್ರ ಮಾಡಿದರು.

ಇದನ್ನೂ ಓದಿ: ಹಾಲಿವುಡ್​ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?

2015ರಲ್ಲಿ ‘ದೃಶ್ಯಂ’ ಸಿನಿಮಾ ತಮಿಳಿಗೆ ‘ಪಾಪನಾಶಂ’ ಟೈಟಲ್​ನಲ್ಲಿ ರಿಮೇಕ್​ ಆಯಿತು. ಅದರಲ್ಲಿ ಕಮಲ್​ ಹಾಸನ್​ ಅವರು ಹೀರೋ ಆಗಿ ನಟಿಸಿದರು. 2017ರಲ್ಲಿ ಸಿಂಗಳ ಭಾಷೆಗೆ ಹಾಗೂ 2019ರಲ್ಲಿ ಚೈನೀಸ್​ ಭಾಷೆಗೂ ಈ ಸಿನಿಮಾವನ್ನು ರಿಮೇಕ್​ ಮಾಡಲಾಯಿತು. 2021ರಲ್ಲಿ ಇಂಡೋನೇಷ್ಯನ್​ ರಿಮೇಕ್​ ಹಾಗೂ 2023ರಲ್ಲಿ ಕೊರಿಯನ್​ ರಿಮೇಕ್​ ಘೋಷಿಸಲಾಯಿತು. ಈಗ ಹಾಲಿವುಡ್​ಗೆ ‘ದೃಶ್ಯಂ’ ಸಿನಿಮಾವನ್ನು ರಿಮೇಕ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ಹಾಲಿವುಡ್ ಸಿನಿಮಾನಲ್ಲಿ ಸದ್ಗುರು ಜಗ್ಗಿ ವಾಸುದೇವ್, ಪಾತ್ರವೇನು?

‘ದೃಶ್ಯಂ’ ಸಿನಿಮಾದ ವಿದೇಶಿ ರಿಮೇಕ್​ ಹಕ್ಕುಗಳನ್ನು ‘ಪನೋರಮಾ ಸ್ಟುಡಿಯೋಸ್​’ ಖರೀದಿ ಮಾಡಿದೆ. ಆ ಸಂಸ್ಥೆ ಈಗ ‘ಗಲ್ಫ್​ ಸ್ಟ್ರೀಮ್​ ಪಿಕ್ಚರ್ಸ್​’ ಹಾಗೂ ‘JOAT Films’ ಸಂಸ್ಥೆಗಳ ಜೊತೆ ಸೇರಿ ‘ದೃಶ್ಯಂ’ ಸಿನಿಮಾವನ್ನು ಹಾಲಿವುಡ್​ನಲ್ಲಿ ರಿಮೇಕ್​ ಮಾಡಲಿವೆ. ಈ ರೀತಿ ರಿಮೇಕ್​ ಆಗುತ್ತಿರುವ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಒಳಗಾಗುತ್ತಿದೆ. ಹಾಲಿವುಡ್​ ಮತ್ತು ಕೊರಿಯಾ ರಿಮೇಕ್​ ಬಳಿಕ ಮುಂದಿನ 3ರಿಂದ 5 ವರ್ಷಗಳಲ್ಲಿ ಇನ್ನೂ 10 ಬೇರೆ ಬೇರೆ ದೇಶಗಳಲ್ಲಿ ಈ ಸಿನಿಮಾವನ್ನು ರಿಮೇಕ್​ ಮಾಡಲಾಗುವುದು ಎಂದು ಈ ನಿರ್ಮಾಣ ಸಂಸ್ಥೆಗಳು ತಿಳಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.