‘ಟಾಕ್ಸಿಕ್​’ಗಾಗಿ ದುಡಿಯಲಿದ್ದಾರೆ ‘ಮ್ಯಾಡ್​ಮ್ಯಾಕ್ಸ್’, ‘ಬ್ಯಾಟ್​ಮ್ಯಾನ್’ ತಂತ್ರಜ್ಞರು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸೆಟ್ಟೇರುವ ಮುಂಚೆಯೇ ದೊಡ್ಡದಾಗಿ ಸದ್ದು ಮಾಡಿತ್ತು. ಇದೀಗ ಬರುತ್ತಿರುವ ಸುದ್ದಿಯಂತೆ ‘ಟಾಕ್ಸಿಕ್’ ಸಿನಿಮಾದಲ್ಲಿ ಹಾಲಿವುಡ್​ನ ಪ್ರಖ್ಯಾತ ಕಲಾವಿದರು, ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಯಾರವರು?

‘ಟಾಕ್ಸಿಕ್​’ಗಾಗಿ ದುಡಿಯಲಿದ್ದಾರೆ ‘ಮ್ಯಾಡ್​ಮ್ಯಾಕ್ಸ್’, ‘ಬ್ಯಾಟ್​ಮ್ಯಾನ್’ ತಂತ್ರಜ್ಞರು
ಯಶ್ ‘ಟಾಕ್ಸಿಕ್‘
Edited By:

Updated on: Aug 08, 2024 | 11:31 AM

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದವರು ದೊಡ್ಡದಾಗಿ ಯೋಚಿಸಬಹುದು, ಗುಣಮಟ್ಟದ ಸಿನಿಮಾ ಮಾಡಿ ಸಾವಿರಾರು ಕೋಟಿ ಹಣ ಗಳಿಸಬಹುದು ಎಂದು ತೋರಿಸಿಕೊಟ್ಟಿರುವ ಹಾಗೂ ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿರುವ ನಟ ಯಶ್ ಇದೀಗ ‘ಟಾಕ್ಸಿಕ್’ ಹೆಸರಿನ ಭಾರಿ ದೊಡ್ಡ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಕ್ಕಿಂತಲೂ ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾ ನೀಡಲು ಯಶ್ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಕೆಲವು ವಿದೇಶಿ ತಂತ್ರಜ್ಞರನ್ನು ಸಿನಿಮಾಕ್ಕೆ ದುಡಿಯಲು ಒಪ್ಪಿಸಲಾಗಿದೆ.

‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವುದಕ್ಕೆ ಮುನ್ನ ಯಶ್ ಹಲವು ಭಾರಿ ವಿದೇಶ ಪ್ರಯಾಣಗಳನ್ನು ಮಾಡಿ ವಿದೇಶದ ಕೆಲವು ಅತ್ಯುತ್ತಮ ತಂತ್ರಜ್ಞರನ್ನು ಭೇಟಿ ಆಗಿದ್ದರು. ಇದೀಗ ಬಂದಿರುವ ಸುದ್ದಿಯಂತೆ ಹಾಲಿವುಡ್​ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್’, ‘ಬ್ಯಾಟ್​ಮ್ಯಾನ್’ ಸಿನಿಮಾಗಳಿಗೆ ಕೆಲಸ ಮಾಡಿರುವ ಕೆಲವು ನಿಪುಣ ತಂತ್ರಜ್ಞರು ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ.

‘ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್’ ಸಿನಿಮಾಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದ ಸ್ಟಿವ್ ಗ್ರಿಫನ್ ಸ್ಟೀವ್ ಗ್ರಿಫಿನ್ ಹಾಗೂ ಡಾರ್ಕ್ ನೈಟ್ ಚಿತ್ರದ ಆಕ್ಷನ್ ಕೊರಿಯೋಗ್ರಾಫರ್ ಟಾಮ್ ಸ್ಟ್ರೂಥರ್ಸ್ ಅವರುಗಳು ‘ಟಾಕ್ಸಿಕ್’ ತಂಡ ಸೇರುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನು ‘ಡಾರ್ಕ್ ನೈಟ್’ ಸೀರಿಸ್, ‘ಆಕ್ವಾಮನ್- 2’, ‘ಮ್ಯಾಡ್ ಮ್ಯಾಕ್ಸ್’ ಚಿತ್ರಗಳಿಗೆ ವಿಎಫ್​ಎಕ್ಸ್ ತಂಡದಲ್ಲಿ ಕೆಲಸ ಮಾಡಿದ್ದ ಕಾರ್ಲೋಸ್ ಕ್ಯಾಸ್ಟಿಲ್ಲೊ, ಡೇಸಿಯೊ ಕ್ಯಾಬಲೆರೊ (ಸ್ಟಂಟ್ ಡಬಲ್), ಕ್ಲೌಡಿಯಾ ಹೈಂಜ್, ಶಿರಾಜ್ ಯಾಸಿನ್ ಕೂಡ ‘ಟಾಕ್ಸಿಕ್’ ಚಿತ್ರಕ್ಕೆ ಕೆಲಸ ಮಾಡುತ್ತಾರೆಂತೆ.

ಇದನ್ನೂ ಓದಿ:ಯಶ್ ಯೋಚನೆ ಆಗಲೇ ಎಷ್ಟು ವಿಶಾಲವಾಗಿತ್ತು: ವಿವರಿಸಿದ ತಮಿಳು ನಿರ್ಮಾಪಕ

ಈ ಹಿಂದೆ ಯಶ್, ಹಾಲಿವುಡ್​ನ ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯೊಟ್ಟಿಗೆ ಕಾಣಿಸಿಕೊಂಡಿದ್ದರು. ತಮ್ಮ ‘ಟಾಕ್ಸಿಕ್’ ಸಿನಿಮಾಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡಿಸಲು ಜೆಜೆ ಪೆರ್ರಿಯನ್ನು ಯಶ್ ಒಪ್ಪಿಸಿದ್ದಾರೆ ಎನ್ನಲಾಗುತ್ತು. ಈಗ ನೋಡಿದರೆ ಜೆಜೆ ಪೆರ್ರಿಯ ಜೊತೆಗೆ ಇನ್ನೂ ಕೆಲವು ಹಾಲಿವುಡ್​ನ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ.

ಇನ್ನು ಸಿನಿಮಾದಲ್ಲಿ ಯಶ್ ಜೊತೆಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಕರೀನಾ ಹಿಂದೆ ಸರಿದಿದ್ದು ಆ ಜಾಗಕ್ಕೆ ನಯನತಾರಾ ಬಂದಿದ್ದಾರೆ. ಇದರ ಜೊತೆಗೆ ಬೆಡಗಿ ಕಿಯಾರಾ ಅಡ್ವಾಣಿ ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ಹೆಸರು ಘೋಷಣೆ ಮಾಡಲಾಯ್ತು. ಅದಾದ ಬಳಿಕ ಸಿನಿಮಾದ ಯಾವುದೇ ಅಪ್​ಡೇಟ್ ಹೊರಬಿಟ್ಟಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Sun, 21 July 24