ಕಾಂತಾರ ಚಿತ್ರತಂಡಕ್ಕೆ ಹೊಸನಗರ ತಹಶೀಲ್ದಾರ್ ನೋಟಿಸ್; ಅನುಮತಿ ಪತ್ರ ಹಾಜರುಪಡಿಸಲು ಸೂಚನೆ

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡಕ್ಕೆ ಎದುರಾಗುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ಇತ್ತೀಚೆಗೆ ಚಿತ್ರದ ಶೂಟಿಂಗ್ ವೇಳೆ ದೋಣಿ ಮಗುಚಿದೆ. ಆ ಬಗ್ಗೆ ಹೊಸನಗರ ತಹಶೀಲ್ದಾರ್ ಸ್ಪಷ್ಟನೆ ಕೇಳಿದ್ದಾರೆ. ಚಿತ್ರೀಕರಣಕ್ಕಾಗಿ ಪಡೆದಿರುವ ಅನುಮತಿ ಪತ್ರಗಳನ್ನು ಹಾಜರುಪಡಿಸುವಂತೆ ಈ ನೋಟಿಸ್​ನಲ್ಲಿ ಸೂಚಿಸಲಾಗಿದೆ. ಆ ಕುರಿತು ಇಲ್ಲಿದೆ ಮಾಹಿತಿ..

ಕಾಂತಾರ ಚಿತ್ರತಂಡಕ್ಕೆ ಹೊಸನಗರ ತಹಶೀಲ್ದಾರ್ ನೋಟಿಸ್; ಅನುಮತಿ ಪತ್ರ ಹಾಜರುಪಡಿಸಲು ಸೂಚನೆ
Rishab Shetty
Updated By: ಮದನ್​ ಕುಮಾರ್​

Updated on: Jun 16, 2025 | 6:49 PM

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್​ 1’ (Kantara Chapter 1) ಚಿತ್ರತಂಡಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಕಾಂತಾರ’ (Kantara) ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ಚಿತ್ರೀಕರಣದ ವೇಳೆ ಮಾಣಿ ಡ್ಯಾಮ್​​​ ಹಿನ್ನೀರಿನಲ್ಲಿ ದೋಣಿ ಮಗುಚಿ ಅವಘಡ ಸಂಭವಿಸಿದ್ದರ ಬಗ್ಗೆ ವರದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಕಾಂತಾರ ಚಿತ್ರತಂಡಕ್ಕೆ ನೋಟಿಸ್​ ನೀಡಲಾಗಿದೆ. ಶೂಟಿಂಗ್​ಗೆ ಪಡೆದ ಅನುಮತಿ ಪತ್ರ ಹಾಜರುಪಡಿಸಲು ಸೂಚಿಸಲಾಗಿದೆ. ನೋಟಿಸ್​ ತಲುಪಿದ 3 ದಿನದೊಳಗೆ ಹಾಜರುಪಡಿಸಲು ಸೂಚನೆ ನೀಡಲಾಗಿದ್ದು, ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ (Hosanagara Tahsildar) ಎಚ್ಚರಿಕೆ ನೀಡಿದ್ದಾರೆ.

‘ಕಾಂತಾರ: ಚಾಪ್ಟರ್​ 1’ ಚಿತ್ರತಂಡಕ್ಕೆ ತಹಶೀಲ್ದಾರ್ ನೀಡಿರುವ ನೋಟಿಸ್ ಈ ರೀತಿ ಇದೆ. ‘ದಿನಾಂಕ 15-06-2025ರಂದು ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಕಾಂತರ: ದಿ ಲೆಜೆಂಡ್ ಭಾಗ-ಒಂದು ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಮಾಣಿ ಜಲಾಶಯದಲ್ಲಿ ದೋಣಿ ಮುಗುಚಿ 30 ಜನ ನೀರಿನಲ್ಲಿ ಈಜಿ ದಡ ಸೇರಿರುತ್ತಾರೆ ಹಾಗೆಯೇ ಒಂದು ಅಂಬುಲೆನ್ಸ್ ಚಿತ್ರೀಕರಣದ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿರುವ ಬಗ್ಗೆ ಪುಕಟವಾಗಿರುತ್ತದೆ. ಸದರಿ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲ್ಲೂಕು ಆಡಳಿತಕ್ಕಾಗಲಿ, ಜಿಲ್ಲಾಡಳಿತಕ್ಕಾಗಲಿ ಯಾವುದೇ ಮಾಹಿತಿಯನ್ನು ತಾವು ನೀಡಿರುವುದಿಲ್ಲ.’

‘ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಸೃಷ್ಟಿಕರಣ ನೀಡಿರುವುದು ಸರಿಯಷ್ಟೇ. ಆದರೆ ಸದರಿ ಸುದ್ದಿಯಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಮಾನ್ಯ ಜಿಲ್ಲಾಧಿಕಾರಿಯವರು ಈ ಬಗ್ಗೆ ವರದಿ ಕೇಳಿದ್ದು, ರಾಜಸ್ವ ನಿರೀಕ್ಷಕರು, ನಗರ ಹೋಬಳಿ ರವರು ನಿಮ್ಮ ಸಂಸ್ಥೆಯ ಮ್ಯಾನೇಜರ್ ಅವರಿಗೆ ಅನುಮತಿ ಪತ್ರಗಳನ್ನು ಹಾಜರುಪಡಿಸಲು ದೂರವಾಣಿ ಮೂಲಕ ಸಂಪರ್ಕಿಸಿದ್ದರೂ ಸಹ ನೀವುಗಳು ಯಾವುದೇ ಸ್ಪಂದನೆ ನೀಡಿರುವುದಿಲ್ಲ.’

ಇದನ್ನೂ ಓದಿ
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ರಿಷಬ್ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾದ ಪೋಸ್ಟರ್ ಬಿಡುಗಡೆ
ರಿಷಬ್ ಶೆಟ್ಟಿ ಮೊದಲ ಹೆಸರೇನು? ನಾಮ ಬದಲಿಸಿಕೊಳ್ಳಲು ಕಾರಣವಾಯಿತು ಆ ಘಟನೆ

‘ದಿನಾಂಕ 15-06-2025ರಂದು ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಅವಶ್ಯವಿರುವುದರಿಂದ ಸಮರ್ಪಕ ದಾಖಲೆಗಳೊಂದಿಗೆ ಈ ನೋಟೀಸ್ ತಲುಪಿದ 3 ದಿನಗಳ ಒಳಗಾಗಿ ಸಮಜಾಯಿಷಿ ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಭಾವಿಸಿ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ತಿಳಿಯಿರಿ’ ಎಂದು ನೋಟೀಸ್ ನೀಡಲಾಗಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚು ಕಲಾವಿದರು ಬಚಾವ್: ಅಷ್ಟಕ್ಕೂ ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ಆಗಿದ್ದೇನು?

ಶೂಟಿಂಗ್ ಆರಂಭ ಆದಾಗಿನಿಂದಲೂ ‘ಕಾಂತಾರ: ಚಾಪ್ಟರ್​ 1’ ಸಿನಿಮಾಗೆ ಹಲವು ವಿಘ್ನಗಳು ಎದುರಾಗುತ್ತಿವೆ. ಕಲಾವಿದರು ಮತ್ತು ತಂತ್ರಜ್ಞರು ನಿಧನರಾಗಿದ್ದು ಕೂಡ ಬೇಸರದ ಸಂಗತಿ. ಈಗ ದೋಣಿ ಮಗುಚಿದ ಘಟನೆ ಕೂಡ ಚರ್ಚೆ ಆಗುತ್ತಿದೆ. ತಹಶೀಲ್ದಾರ್ ನೋಟಿಸ್​ಗೆ ಚಿತ್ರತಂಡ ಯಾವ ರೀತಿ ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:40 pm, Mon, 16 June 25