ಬೆಂಗಳೂರು: ನಟ ದರ್ಶನ್ (Actor Darshan) ಮೇಲೆ ಗಂಭೀರ ಆರೋಪ ಮಾಡಿರುವ ಇಂದ್ರಜಿತ್ ಲಂಕೇಶ್ (Indrajit Lankesh) ಇಂದು ಮತ್ತೊಂದು ಸುದ್ದಿಗೋಷ್ಠಿ (Press Meet) ನಡೆಸುವ ಸಾಧ್ಯತೆ ಇದೆ. ಆದರೆ, ಆರೋಪಗಳಿಗೆ ಸಂಬಂಧಿಸಿದಂತೆ ದರ್ಶನ್ ಮಾತನಾಡಿದ ನಂತರವೇ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ಮಾಡುತ್ತಾರೆ ಎನ್ನಲಾಗಿದ್ದು, ದರ್ಶನ್ ಹೇಳಿಕೆಗಳಿಗೆ ಆ ಮೂಲಕ ತಿರುಗೇಟು ನೀಡಲು ಸಜ್ಜಾದಂತೆ ಕಂಡುಬರುತ್ತಿದೆ. ಸದ್ಯ ನಿರ್ದೇಶಕ ಇಂದ್ರಜಿತ್ ಮನೆಗೆ ಪೊಲೀಸರು ಭದ್ರತೆ ನೀಡಿದ್ದು, ದರ್ಶನ್ ಅಭಿಮಾನಿಗಳು (Darshan Fans) ಜಮಾಯಿಸುವ ಸಾಧ್ಯತೆ ಇರುವುದರಿಂದ ಕೋರಮಂಗಲ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಹೊಯ್ಸಳ ಪೊಲೀಸರು ಮೊಕ್ಕಾಂ ಹೂಡಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಆರೋಪಗಳಿಗೆ ಸಂಬಂಧಿಸಿದಂತೆ ದರ್ಶನ್ ಪ್ರತಿಕ್ರಿಯೆಗೆ ಕಾಯುತ್ತಿರುವ ಇಂದ್ರಜಿತ್ ಲಂಕೇಶ್ ಇಂದು ಬೆಳಗ್ಗೆ 11 ಗಂಟೆ ನಂತರ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಯಲ್ಲಿ ಕೆಲ ಮಹತ್ತರ ವಿಚಾರಗಳನ್ನು ಪ್ರಸ್ತಾಪಿಸಲಿದ್ದು, ಸಾಕ್ಷ್ಯಾಧಾರಗಳ ಸಮೇತ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದ್ರಜಿತ್ ಲಂಕೇಶ್ ಬಳಿ ಹಲ್ಲೆಗೆ ಸಂಬಂಧಿಸಿದ ಫೋಟೋ, ವಿಡಿಯೋ ಸೇರಿದಂತೆ ಸಾಕ್ಷ್ಯಗಳು ಇರಬಹುದು ಎನ್ನುವ ಅನುಮಾನವೂ ವ್ಯಕ್ತವಾಗುತ್ತಿದ್ದು, ಅದನ್ನು ಸುದ್ದಿಗೋಷ್ಠಿ ವೇಳೆ ಪ್ರಸ್ತುತಪಡಿಸುವ ಸಾಧ್ಯತೆ ಇದೆ.
ಈಗಾಗಲೇ ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಾಲ್ ಅರಸ್, ನನ್ನ ಮೇಲೆ ದರ್ಶನ್ ಹಲ್ಲೆ ಮಾಡಿಲ್ಲ, ಇಂದ್ರಜಿತ್ ಲಂಕೇಶ್ ಹೇಳಿರುವುದು ಸುಳ್ಳು, ನಾನು ಕೋಮಾದಲ್ಲೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.. ಆದರೆ ಇಂದ್ರಜಿತ್ ಲಂಕೇಶ್ ಮಾತ್ರ ಗೋಪಾಲ್ ಅರಸ್ ಮೇಲೆ ಹಲ್ಲೆ ಆಗಿರೋದಕ್ಕೆ ಸಾಕ್ಷ್ಯ ಕೊಡುತ್ತೀನಿ ಎಂದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಹೀಗಾಗಿ ಇಂದು ಇಂದ್ರಜಿತ್ ಕೆಲವು ದಾಖಲೆ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ದರ್ಶನ್ ಸುದ್ದಿಗೋಷ್ಠಿ ಬಳಿಕ ಇಂದ್ರಜಿತ್ ಲಂಕೇಶ್ ಮಾತನಾಡಲಿದ್ದಾರೆ ಎನ್ನಲಾಗಿದ್ದು, ನಿನ್ನೆ ಒಟ್ಟು ಮೂರು ಹಲ್ಲೆ ಪ್ರಕರಣದ ಆರೋಪ ಮಾಡಿದ್ದ ಇಂದ್ರಜಿತ್ ಇಂದು ಆ ಎಲ್ಲಾ ಹಲ್ಲೆಗೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇದೆ.
ಇತ್ತ ಮೈಸೂರಿನಲ್ಲೇ ಬೀಡು ಬಿಟ್ಟಿರುವ ನಟ ದರ್ಶನ್, ಮೈಸೂರಿನ ತಮ್ಮ ಫಾರಂ ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ. ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರಂ ಹೌಸ್‌ನಲ್ಲಿ ನಿನ್ನೆಯೇ ತಮ್ಮ ಸ್ನೇಹಿತರು ಹಾಗೂ ಸಂದೇಶ್‌ರನ್ನು ಭೇಟಿ ಮಾಡಿರುವ ದರ್ಶನ್, ಮಾತುಕತೆ ನಡೆಸಿದ್ದಾರೆ. ಸಂದೇಶ್ ಜತೆ ಮಾತುಕತೆ ನಡೆಸಿ ವಾಪಸ್ಸಾದ ದರ್ಶನ್ ಇಂದು ಮಾಧ್ಯಮದ ಮುಂದೆ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದ್ದು, ಮೌನಕ್ಕೆ ಶರಣಾಗುವಂತೆ ಆಪ್ತ ಸ್ನೇಹಿತರು ನೀಡಿರುವ ಸಲಹೆಯನ್ನು ಪರಿಗಣಿಸಿ ದರ್ಶನ್ ಸುಮ್ಮನಿರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಮೊದಲು ತನಿಖೆಯಾಗಲಿ ನಂತರ ಈ ಬಗ್ಗೆ ಮಾತನಾಡಿ ಎಂದು ಸ್ನೇಹಿತರೂ ಸಲಹೆ ನೀಡಿದ್ದು, ಕಾನೂನು ಹೋರಾಟದಲ್ಲೇ ಎಲ್ಲವೂ ಹೊರಬರಲಿ ಎಂಬ ನಿಲುವು ತಳೆಯುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:
‘ದರ್ಶನ್ ನನ್ನ ಮೇಲೆ ಹಲ್ಲೆ ಮಾಡಿಲ್ಲ, ನಾನು ಕೋಮಾದಲ್ಲೂ ಇಲ್ಲ, ಇಂದ್ರಜಿತ್ ಲಂಕೇಶ್ ಹೇಳಿಕೆ ಸುಳ್ಳು’
Published On - 9:49 am, Fri, 16 July 21