ಬೆಂಗಳೂರು: ಆ್ಯಂಕರ್ ಅನುಶ್ರೀ ಹೆಸರನ್ನು ಸಿಸಿಬಿ ಪೊಲೀಸರ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಪ್ರಕರಣದ ಎ2 ಕಿಶೋರ್ ಶೆಟ್ಟಿ ಅನುಶ್ರೀ ಹೆಸರನ್ನು ಉಲ್ಲೇಖಿಸಿ, ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತಂತೆ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ‘ಈ ಪ್ರಕರಣಕ್ಕೆ ರಾಜಕೀಯ, ಚಿತ್ರರಂಗ, ಸಾಮಾಜಿಕ ಸೇರಿದಂತೆ ಹಲವಾರು ಆಯಾಮಗಳಿವೆ. ಆದ್ದರಿಂದಲೇ ಇದು ನಮ್ಮ ರಾಜ್ಯದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಸ್ಕ್ಯಾಂಡಲ್’ ಎಂದು ಇಂದ್ರಜಿತ್ ಡ್ರಗ್ಸ್ ಪ್ರಕರಣದ ಕುರಿತಂತೆ ಗಂಭೀರ ಆರೋಪ ಮಾಡಿದ್ದಾರೆ.
‘‘ಕರ್ನಾಟಕದ ಡ್ರಗ್ಸ್ ಜಾಲದ ಬಗ್ಗೆ ಈ ಹಿಂದೆ ಮಾತನಾಡಿದ್ದೆ. ಹಲವರು ನನ್ನ ಬೆನ್ನುತಟ್ಟಿದ್ದರು, ಕೆಲವರು ಟೀಕೆ ಸಹ ಮಾಡಿದ್ದರು. ಆದರೆ ಇದು ಒನ್ ಡೇ ಮ್ಯಾಚ್ ಅಲ್ಲ. ಡ್ರಗ್ಸ್ ವಿರುದ್ಧ ನಿರಂತರ ಕಾರ್ಯಾಚರಣೆ ಅಗತ್ಯವಾಗಿದ್ದು, ಈ ಹಿಂದೆ ಪೊಲೀಸರೆದುರು ವಿಚಾರಣೆಗೆ ಬಂದವರೆಲ್ಲ ಬೆಂಗಳೂರಿನಲ್ಲಿ ಈಗ ಮತ್ತೆ ಪಾರ್ಟಿ ಮಾಡುತ್ತಿದ್ದಾರೆ’’ ಎಂದು ಇಂದ್ರಜಿತ್ ಆರೋಪ ಮಾಡಿದ್ದಾರೆ. ಕೊವಿಡ್ ಎರಡನೇ ಅಲೆ ನಂತರ ಮತ್ತೆ ಪಾರ್ಟಿ ಜಾಸ್ತಿಯಾಗಿದೆ. ಡ್ರಗ್ಸ್ ಸೇವನೆ ಜಾಸ್ತಿಯಾಗಿದೆ. ಆದ್ದರಿಂದಲೇ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಆಗಬಾರದು. ಪೊಲೀಸರು ಎಲ್ಲರನ್ನೂ ಸರಿಯಾಗಿ ವಿಚಾರಣೆ ಮಾಡಬೇಕು ಎಂದು ಇಂದ್ರಜಿತ್ ಹೇಳಿದ್ಧಾರೆ.
ಸಿಸಿಬಿ ಪೊಲೀಸರು ಬಂಧಿತ ಹೆಸರನ್ನು ಹೇಳಿದ್ದರೂ ಏಕೆ ಟೆಸ್ಟ್ ಮಾಡಿಸಿಲ್ಲ ಎಂದು ಇಂದ್ರಜಿತ್ ಇದೇ ವೇಳೆ ಪ್ರಶ್ನಿಸಿದ್ದಾರೆ. ‘‘ಸಿಸಿಬಿ ಪೊಲೀಸರಿಗೆ ನನ್ನ ಬಳಿ ಇದ್ದ ಎಲ್ಲ ಮಾಹಿತಿ ನೀಡಿದ್ದೆ. ಯೂರಿನ್, ಬ್ಲಡ್ ಸ್ಯಾಂಪಲ್ ಟೆಸ್ಟ್ ಮಾಡಿದರೆ ಸಾಕಾಗುವುದಿಲ್ಲ. ಕೂದಲ ಸ್ಯಾಂಪಲ್ ಟೆಸ್ಟ್ ಮಾಡಬೇಕು ಎಂದು ಹೇಳಿದ್ದೆ. ಆದರೆ ಕೆಲವರಿಗೆ ಬೆಣ್ಣೆ, ಕೆಲವರಿಗೆ ಸುಣ್ಣ ಎಂಬಂತೆ ಟೆಸ್ಟ್ ಮಾಡಿದ್ದಾರೆ. ಸಿಸಿಬಿಯವರಿಗೆ ರಾಜಕೀಯ ಒತ್ತಡವಿತ್ತೇ? ಸ್ಟೇಟ್‌ಮೆಂಟ್‌ನಲ್ಲಿ ಆರೋಪ ಪ್ರೂವ್ ಮಾಡಲು ಸಾಧ್ಯವಿಲ್ಲ ಎಂದು ಇಂದ್ರಜಿತ್ ಸಿಸಿಬಿ ಪೊಲೀಸರ ತನಿಖಾ ನಡೆಯ ವಿರುದ್ಧ ಆರೋಪ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆಯ ನಂತರ ಪಾರ್ಟಿ ಡ್ರಗ್ಸ್ ಸೇವನೆ ಜಾಸ್ತಿಯಾಗಿದೆ ಎಂದಿರುವ ಇಂದ್ರಜಿತ್, ಸಿಸಿಬಿಗೆ ಹೇಳಿಕೆ ನೀಡಿದವರು ಕೂಡ ಮತ್ತೆ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾನೂನಾತ್ಮಕವಾಗಿ ಡ್ರಗ್ಸ್ ಪೆಡ್ಲರ್ಗೆ ಶಿಕ್ಷೆ ಜಾಸ್ತಿ ಇದೆ. ಆದರೆ ಡ್ರಗ್ಸ್ ಸೇವನೆ ಮಾಡಿದವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ಇದೆ. ಡ್ರಗ್ಸ್ ಸೇವನೆ ಮಾಡಿದವರನ್ನು ಪುನರ್ವಸತಿಗೂ ಕಳಿಸುವ ವ್ಯವಸ್ಥೆಯಿದೆ. ಆದರೆ ಡ್ರಗ್ಸ್ ಪೆಡ್ಲಿಂಗ್ ಎನ್ನುವುದು ಬಹುದೊಡ್ಡ ಮಾಫಿಯಾ ಎಂದು ಇಂದ್ರಜಿತ್ ಹೇಳಿದ್ದಾರೆ.
ಪ್ರಕರಣದಲ್ಲಿ ವಿಚಾರಣೆ ನಿಧಾನಗತಿಯಲ್ಲಿ ಸಾಗಿರುವುದಕ್ಕೆ ಮತ್ತು ಆರೋಪ ಬಂದಾಗ ಸರಿಯಾದ ತನಿಖೆ ಕೈಗೊಳ್ಳದೇ ಇರುವುದಕ್ಕೆ ಇಂದ್ರಜಿತ್ ವ್ಯವಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ‘‘ಕಿಶೋರ್ ಶೆಟ್ಟಿ ಹೇಳಿಕೆ ಕೊಟ್ಟ ತಕ್ಷಣ ತನಿಖೆ ಮಾಡಬೇಕಾಗಿತ್ತು. ಆದರೆ ಮಾಡಿಲ್ಲ. ಆದ್ದರಿಂದಲೇ ನ್ಯಾಯಾಲಯದಲ್ಲಿ ಪ್ರಕರಣಗಳು ಫೇಲ್ ಆಗೋದು. ಗೌರಿ ಹತ್ಯೆ ಆಗಿ 4 ವರ್ಷ ಆಗಿದೆ. ಆದರೆ ಇನ್ನೂ ಕೋರ್ಟ್ನಲ್ಲಿ ಟ್ರಯಲ್ ಆಗಿಲ್ಲ. ಇದನ್ನೆಲ್ಲ ನೋಡಿದಾಗ ವ್ಯವಸ್ಥೆ ಬಗ್ಗೆ ಬೇಸರವಾಗತ್ತದೆ. ಕೋರ್ಟ್ನಲ್ಲಿ ವಿಚಾರ ಇರೋದರಿಂದ ನಾನು ಮಾತನಾಡಲು ಸಾಧ್ಯವಿಲ್ಲ’’ ಎಂದು ಇಂದ್ರಜಿತ್ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ:
ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್ ವಿಚಾರ; ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೃಹ ಸಚಿವ
(Indrajit Lankesh on Anushree and Sandalwood scandal)