ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಪರವಾಗಿ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಸ್ಯಾಂಡಲ್ವುಡ್ ಹಾಗೂ ಪರಭಾಷೆಯ ಕಲಾವಿದರು ಆಗಮಿಸುತ್ತಿದ್ದಾರೆ. ಇದಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೂಡ ಆಗಮಿಸಿದ್ದಾರೆ. ಈ ವೇಳೆ ಸರ್ಕಾರದ ಎದುರು ಒಂದು ಹೊಸ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡುವುದಾಗಿ ಹೇಳಿದ್ದಾರೆ.
ಪುನೀತ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಹೀಗಾಗಿ, ಪುನೀತ್ ಜನ್ಮದಿನವನ್ನು ಅಪ್ಪು ದಿನಾಚರಣೆಯಾಗಿ ಮಾಡಬೇಕು ಎಂದು ಅವರು ಕೋರಿದ್ದಾರೆ. ‘ನಾನು ಪುನೀತ್ ಒಂದೇ ವರ್ಷ ಒಂದೇ ತಿಂಗಳು ಚಿತ್ರರಂಗ ಜರ್ನಿ ಆರಂಭಿಸಿದೆವು. ಅವರ ನಟನೆಯ ಮೊದಲ ಸಿನಿಮಾ ಏಪ್ರಿಲ್ನಲ್ಲಿ ತೆರೆಗೆ ಬಂತು. ನನ್ನ ನಿರ್ದೇಶನದ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಆಯ್ತು. ಪುನೀತ್ ನಾನು ಪ್ರಶಸ್ತಿ ಸ್ವೀಕರಿಸಲು ಮುಂಬೈಗೆ ತೆರಳಿದ್ದೆವು. ಆಗಿನಿಂದಲೇ ನನಗೆ ಅವರ ಪರಿಚಯ ಇತ್ತು. ರಾಜ್ಕುಮಾರ್ ಅವರ ಹಾದಿಯಲ್ಲೇ ಪುನೀತ್ ನಡೆದಿದ್ದಾರೆ’ ಎಂದರು ಇಂದ್ರಜಿತ್.
‘ಪುನೀತ್ ಡ್ಯಾನ್ಸ್ನಲ್ಲಿ ಮಿಂಚಿದ್ದಾರೆ. ಅವರು ನಮ್ಮ ಜತೆಗೆ ಈಗಲೂ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ನಗುವನ್ನು ತೋರಿಸಿಕೊಟ್ಟರು. ಅವರ ಜೀವನ ಆಧಾರವಾಗಿಟ್ಟುಕೊಂಡು ನಾವು ಜೀವನ ಸಾಗಿಸಬೇಕು. ಅವರು ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಪ್ರತಿಯೊಬ್ಬ ಮಹಿಳೆಯರಿಗೆ, ಮಕ್ಕಳಿಗೆ ಅವರು ಸಹಾಯ ಮಾಡಿದ್ದಾರೆ’ ಎಂದಿದ್ದಾರೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಒಂದು ಮನವಿ ಸಲ್ಲಿಕೆ ಮಾಡಬೇಕು. ಅವರ ಹುಟ್ಟಿದ ಹಬ್ಬವನ್ನು ‘ಅಪ್ಪು ದಿನಾಚರಣೆ’ಯನ್ನಾಗಿ ಮಾಡಬೇಕು. ಪುನೀತ್ ಹೃದಯದಲ್ಲಿ ಶ್ರೀಮಂತರು. ಅವರಿಗೆ ನಾವೇನೂ ಕೊಡಬೇಕಿಲ್ಲ. ಆದರೆ, ಪುನೀತ್ ಹೆಸರಲ್ಲಿ ಒಂದಷ್ಟು ಯುವ ಪ್ರತಿಭೆಗಳಿಗೆ ಸ್ಕಾಲರ್ಶಿಪ್ ಕೊಡುವ ಕೆಲಸ ಆಗಬೇಕು. ಸಿಎಂ ಫಂಡ್ನಿಂದ ಈ ರೀತಿಯ ಕೆಲಸ ಆಗಬೇಕು. ಆ ಮೂಲಕ ಪುನೀತ್ ದಿನಾಚರಣೆ ಆಚರಿಸಬೇಕು’ ಎಂದು ಕೋರಿದರು ಅವರು.
ಇದನ್ನೂ ಓದಿ: ‘ಪುನೀತ ನಮನ’ ಕಾರ್ಯಕ್ರಮ ಲೈವ್ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Tue, 16 November 21