
ಡಾಲಿ ಧನಂಜಯ್ (Daali Dhananjay) ಸಿನಿಮಾ ವೃತ್ತಿ ಜೀವನದಲ್ಲಿ ‘ರತ್ನನ್ ಪ್ರಪಂಚ’ ಒಂದು ಅಪರೂಪದ ಮತ್ತು ಅತ್ಯುತ್ತಮ ಸಿನಿಮಾ ಸಹ ಹೌದು. ಆ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ರೋಹಿತ್ ಪದಕಿ ಡಾಲಿ ಧನಂಜಯ್ ಕಾಂಬಿನೇಷನ್ನಲ್ಲಿ ‘ಉತ್ತರಕಾಂಡ’ ಸಿನಿಮಾ ಘೋಷಣೆಯಾಯ್ತು. ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿ ಸಖತ್ ನಿರೀಕ್ಷೆ ಹುಟ್ಟಿಸಿತ್ತು. ಅದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್, ರಮ್ಯಾ ಅವರುಗಳು ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಹಠಾತ್ತಾಗಿ ಸಿನಿಮಾದ ಸುದ್ದಿಯೇ ಇಲ್ಲದಾಗಿದೆ?
ನಿನ್ನೆ ನಟ ಡಾಲಿ ಧನಂಜಯ್ ಅವರು ಸುದ್ದಿಗೋಷ್ಠಿಯೊಂದನ್ನು ಕರೆದಿದ್ದರು. ಈ ವೇಳೆ ‘ಉತ್ತರಕಾಂಡ’ ಸಿನಿಮಾ ನಿಂತೇ ಹೋಯ್ತೆ?’ ಎಂಬ ಪ್ರಶ್ನೆ ಡಾಲಿಗೆ ಎದುರಾಯ್ತು, ಪ್ರಶ್ನೆಗೆ ಉತ್ತರಿಸಿದ ಧನಂಜಯ್, ‘ಉತ್ತರಕಾಂಡ ಸದ್ಯಕ್ಕೆ ಆಗಿಲ್ಲ, ನಿಂತಿದೆ. ಬೇರೆ ಬೇರೆ ಕಾರಣಕ್ಕೆ ಕೆಲವು ಪ್ರಾಜೆಕ್ಟ್ಗಳು ನಿಧಾನ ಆಗುತ್ತಾ ಹೋಗುತ್ತವೆ. ಆದರೆ ಅದನ್ನು ಹಾಗೆ ಬಿಡುವುದಿಲ್ಲ ಖಂಡಿತ ಮಾಡುತ್ತೀವಿ, ಪೂರ್ತಿ ಮಾಡಿ ಜನರ ಎದುರು ತೆಗೆದುಕೊಂಡು ಹೋಗುತ್ತೇವೆ. ಶಿವಣ್ಣ ಜೊತೆಗೂ ಮಾತನಾಡಿದ್ದೇನೆ’ ಎಂದಿದ್ದಾರೆ ಡಾಲಿ.
ಇದನ್ನೂ ಓದಿ:ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ
ಮುಂದುವರೆದು, ‘ಉತ್ತರಕಾಂಡ’ ಸಿನಿಮಾದ ಚಿತ್ರಕತೆ ಕೆಲಸ ಸದ್ಯಕ್ಕೆ ಚಾಲ್ತಿಯಲ್ಲಿದೆ. ಸಿನಿಮಾ ತಡ ಆಗಿದ್ದರಿಂದ ಮೊದಲಿನ ಚಿತ್ರಕತೆಗೆ ಸಾಕಷ್ಟು ಬದಲಾವಣೆ, ಇನ್ನಷ್ಟು ಹರಿತಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಿನಿಮಾವನ್ನು ಬಹಳ ದೊಡ್ಡದಾಗಿ, ಭಿನ್ನವಾಗಿ ತೆರೆಗೆ ತರುವ ಯೋಚನೆ ನಮಗೆ ಇದೆ. ಎಲ್ಲೇ ಹೋದರು ‘ಉತ್ತರಕಾಂಡ’ ಸಿನಿಮಾದ ಬಗ್ಗೆಯೇ ಕೇಳುತ್ತಾರೆ. ಹಾಗಾಗಿ ಸದ್ಯಕ್ಕೆ ನನ್ನ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿ ‘ಉತ್ತರಕಾಂಡ’ ಸಿನಿಮಾ ಶುರು ಮಾಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ.
ಡಾಲಿ ಧನಂಜಯ್ ಅವರು ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಸುಮಾರು ಎರಡು ವರ್ಷಗಳಾಗುತ್ತಾ ಬಂತು. ಇದೀಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಹಲಗಲಿ’, ‘ಜಿಂಗೊ’ ಮತ್ತು ‘ಅಣ್ಣ ಫ್ರಂ ಮೆಕ್ಸಿಕೊ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜೆಸಿ’, ‘ಹೆಗ್ಗಣ ಮುದ್ದು’ ಇನ್ನೂ ಕೆಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Sat, 31 January 26