ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಸಿಎಂ ಸಿದ್ದರಾಮಯ್ಯ
ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅವರು ‘ಕಲ್ಟ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡು ಈ ಸಿನಿಮಾವನ್ನು ನೋಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಅವರು ತಮ್ಮ ವಿಮರ್ಶೆ ಹಂಚಿಕೊಂಡರು. ಅವರಿಗೆ ಈ ಚಿತ್ರ ಇಷ್ಟ ಆಗಿದೆ.

ರಚಿತಾ ರಾಮ್, ಝೈದ್ ಖಾನ್ (Zaid Khan), ಮಲೈಕಾ ವಸುಪಾಲ್ ಮುಂತಾದವರು ನಟಿಸಿರುವ ‘ಕಲ್ಟ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಹೊಸ ತಲೆಮಾರಿನ ಯುವಕ-ಯುವತಿಯರ ಪ್ರೇಮ್ ಕಹಾನಿ ಈ ಸಿನಿಮಾದಲ್ಲಿ ಇದೆ. ಈಗ ಈ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವೀಕ್ಷಿಸಿದ್ದಾರೆ. ಅವರಿಗಾಗಿ ಬೆಂಗಳೂರಿನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ‘ಕಲ್ಟ್’ ಸಿನಿಮಾ (Cult Kannada Movie) ನೋಡಿದ ಬಳಿಕ ಅವರು ತಮ್ಮ ವಿಮರ್ಶೆ ತಿಳಿಸಿದರು. ಸಿನಿಮಾ ಹೇಗಿದೆ ಎಂಬುದನ್ನು ಸಿದ್ದರಾಮಯ್ಯ ಅವರು ಮಾಧ್ಯಮಗಳ ಎದುರು ವಿವರಿಸಿದರು.
‘ಕಲ್ಟ್ ಎಂಬುದು ಕನ್ನಡ ಚಿತ್ರರಂಗದಲ್ಲಿ ಹೊಸ ಮಾದರಿಯ ಸಿನಿಮಾ. ಝೈದ್ ಖಾನ್ ಅವರು ತುಂಬಾ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ರಚಿತಾ ರಾಮ್ ಮತ್ತು ಹೊಸ ಹುಡುಗಿ ಮಲೈಕಾ ಅವರು ನಟಿಸಿದ್ದಾರೆ. ರಚಿತಾ ರಾಮ್ ಅವರ ಇತ್ತೀಚಿನ ಸಿನಿಮಾವನ್ನು ನಾನು ನೋಡಿದ್ದೇನೆ. ಈ ಹಿಂದೆ ವಿದ್ಯಾರ್ಥಿ ಆಗಿದ್ದಾಗ, ಲಾಯರ್ ಆಗಿದ್ದಾಗ ನಾನು ಬಹಳ ಸಿನಿಮಾಗಳನ್ನು ನೋಡುತ್ತಿದ್ದೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ಕಲ್ಟ್ ಸಿನಿಮಾ ಹೊಸ ಥರ ಇದೆ. ಲವ್ನಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಒಂದು ವೇಳೆ ಸಿಕ್ಕಿಹಾಕಿಕೊಂಡರೆ ಅದರಿಂದ ಹೊರಗೆ ಬರೋದು ಬಾರಿ ಕಷ್ಟ ಆಗುತ್ತದೆ ಎಂಬುದು ಈ ಸಿನಿಮಾ ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪ್ರೀತಿಸಿದ ಹುಡುಗಿ ತನ್ನ ಖುಷಿ, ಶೋಕಿಗಾಗಿ ನಿಜವಾದ ಪ್ರೀತಿಯನ್ನು ಅಲ್ಲಗಳೆಯುತ್ತಾಳೆ. ಅದು ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ನಡೆಯುತ್ತದೆ’ ಎಂದಿದ್ದಾರೆ ಸಿದ್ದರಾಮಯ್ಯ.
ಇದನ್ನೂ ಓದಿ: ಹೌಸ್ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
‘ಲವ್ ಶಾಶ್ವತ ಎಂಬ ಕೆಲಸವನ್ನು ಭಗ್ನಪ್ರೇಮಿ ಮಾಡುತ್ತಾನೆ. ಝೈದ್ ಖಾನ್ ಅವರ ನಟನೆ ಬಹಳ ಚೆನ್ನಾಗಿದೆ. ಇದು ಇಡೀ ಕುಟುಂಬ ನೋಡಬೇಕಾದ ಸಿನಿಮಾ. ಆದರೆ ಇದಕ್ಕೆ ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅಂತ ನನಗೆ ಝೈದ್ ಖಾನ್ ಹೇಳಿದರು. ಎ ಸರ್ಟಿಫಿಕೇಟ್ ಕೊಡುವಂತಹ ಸಿನಿಮಾ ಅಲ್ಲ ಇದು. ಅಂತಹ ಸಿನಿಮಾಗಳು ಬೇರೆ ಇರುತ್ತವೆ. ಇದಕ್ಕೆ ಎ ಸರ್ಟಿಫಿಕೇಟ್ ಯಾಕೆ ಕೊಟ್ಟರೋ ನನಗೆ ಗೊತ್ತಿಲ್ಲ. ಕೊಡಬಾರದಾಗಿತ್ತು ಎಂಬುದು ನನ್ನ ಅಭಿಪ್ರಾಯ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜನವರಿ 23ರಂದು ‘ಕಲ್ಟ್’ ಸಿನಿಮಾ ಬಿಡುಗಡೆ ಆಯಿತು. ಈ ಚಿತ್ರಕ್ಕೆ ಅನಿಲ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಕಿಶನ್ ಬಿಳಗಲಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




