ಉದಯನಿಧಿ ಸ್ಟಾಲಿನ್ ಬಂಧಿಸಿದ್ದು ಉತ್ತಮ ನಿರ್ಧಾರ: ಖಡಕ್ ಆಗಿ ಹೇಳಿದ ಕಂಗನಾ ರಣಾವತ್
ನಟಿ ತ್ರಿಷಾ ಕೃಷ್ಣನ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಬೆಂಬಲಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ (Trisha Krishnan) ಕುರಿತು ಸಾರ್ವಜನಿಕ ಸಭೆಯಲ್ಲಿ ಅಸಭ್ಯ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದರು. ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು, ಇದೀಗ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಸಾರ್ವಜನಿಕವಾಗಿ ಅಸಭ್ಯ ಮಾತುಗಳನ್ನು ಆಡುವುದು, ದ್ವಂದ್ವಾರ್ಥದ ಶೈಲಿಯಲ್ಲಿ ಅಶ್ಲೀಲ ಜೋಕ್‌ಗಳನ್ನು ಮಾಡುವುದನ್ನು ಯಾವುದೇ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಈ ಅಪರಾಧಕ್ಕಾಗಿ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿತ್ತು, ಅವರು ಜಾಮೀನಿನ ಮೇಲೆ ಹೊರಬಂದಿರಬಹುದು, ಆದರೆ ಈ ಕ್ರಮವು ಒಂದು ಉತ್ತಮ ನಿರ್ಧಾರ ಹಾಗೂ ಮುನ್ನೆಚ್ಚರಿಕೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಕಾವೇರಿ ನೀರು ಹಂಚಿಕೆ ಕುರಿತು ತಂಜಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಮಾತನಾಡುತ್ತಿದ್ದಾಗ, ಪ್ರೇಕ್ಷಕರೊಬ್ಬರು ನಟಿ ತ್ರಿಷಾ ಹೆಸರನ್ನು ಕೂಗಿದ್ದರು. ಈ ವೇಳೆ ಉದಯನಿಧಿ ಅವರು ದ್ವಂದ್ವಾರ್ಥದ ಹೇಳಿಕೆ ನೀಡಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮಹಿಳಾ ವಿಭಾಗವು ಪೊಲೀಸರಿಗೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು.
ಉದಯನಿಧಿ ಮತ್ತು ಡಿಎಂಕೆ ಸ್ಪಷ್ಟನೆ:
ಚೆನ್ನೈನ ತಮ್ಮ ನಿವಾಸದಲ್ಲಿ ವಶಕ್ಕೆ ಒಳಗಾದ ಬಳಿಕ ಮಾತನಾಡಿದ ಉದಯನಿಧಿ ಸ್ಟಾಲಿನ್, ‘ನಾನು ಯಾರ ಹೆಸರನ್ನೂ ಹೇಳಿಲ್ಲ ಮತ್ತು ಅಸಭ್ಯವಾಗಿ ಮಾತನಾಡಿಲ್ಲ. ಇದೊಂದು ರಾಜಕೀಯ ಹಾಸ್ಯಾಸ್ಪದ ಸಂಗತಿ. ನಾನು ಕಾನೂನು ಹೋರಾಟ ಎದುರಿಸಲು ಸಿದ್ಧ’ ಎಂದಿದ್ದಾರೆ. ಡಿಎಂಕೆ ಹಿರಿಯ ನಾಯಕ ಟಿ.ಆರ್. ಬಾಲು ಕೂಡ ಇದನ್ನು ರಾಜಕೀಯ ದ್ವೇಷದಿಂದ ಕೂಡಿದ ಸುಳ್ಳು ದೂರು ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್
ಮದ್ರಾಸ್ ಹೈಕೋರ್ಟ್ ಸೂಚನೆ:
ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ವಿಚಾರಣೆ ಮುಗಿದ ತಕ್ಷಣವೇ ಉದಯನಿಧಿ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಉದಯನಿಧಿ ಅವರಿಗೆ ಹೈಕೋರ್ಟ್ ಸೂಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




