
ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಪೈರಸಿ (Piracy) ವಿರುದ್ಧ ಧ್ವನಿ ಎತ್ತಿದ್ದಾರೆ. ರಾಜ್ಯಸಭೆಯಲ್ಲಿ ಅವರು ಈ ಬಗ್ಗೆ ಚರ್ಚಿಸಿದ್ದಾರೆ. ಅದರ ಫಲವಾಗಿ ಸರ್ಕಾರದಿಂದ ಭರವಸೆ ಸಿಕ್ಕಿದೆ. ಆ ಬಗ್ಗೆ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗಕ್ಕೂ ಪೈರಸಿ ಎಂಬುದು ಮಾರಕ ಆಗಿದೆ. ಇದರ ವಿರುದ್ಧ ಹೋರಾಡಲು ಕನ್ನಡ ಚಿತ್ರರಂಗದ ಯಾರೂ ಕೂಡ ತಮಗೆ ಬೆಂಬಲ ನೀಡಲಿಲ್ಲ ಎಂದು ಜಗ್ಗೇಶ್ (Jaggesh) ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಮಾಡಿದ ಪೋಸ್ಟ್ ಈ ರೀತಿ ಇದೆ..
‘ರಾಜ್ಯಸಭೆಯಲ್ಲಿ ಸಿನಿಮಾ #piracy ಕಳ್ಳರ ಮಟ್ಟಹಾಕಲು ಶೂನ್ಯ ವೇಳೆಯಲ್ಲಿ ರಾಷ್ಟ್ರಸರ್ಕಾರವನ್ನು ಒತ್ತಾಯ ಮಾಡಿದ ಪ್ರತಿಫಲಕ್ಕೆ ರಾಷ್ಟ್ರಸರ್ಕಾರ ಒಪ್ಪಿಗೆ ಸೂಚಿಸಿ ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡುಹಿಡಿದು ದಂಡ, ಜೈಲು ಕ್ರಮ ತೆಗೆದುಕೊಳ್ಳುವ ಹಾಗು ಸಿನಿಮಾ ಪೈರಸಿ app ಬಂದ್ ಮಾಡುವ ನಿರ್ಧಾರ ಮಾಡಿದ್ದು, ವೈಯಕ್ತಿಕವಾಗಿ ಹಾಗು ಭಾರತೀಯ ಚಿತ್ರರಂಗದ ಪರ ಹರ್ಷ ವ್ಯಕ್ತಪಡಿಸುವೆ.’
‘ಚಿತ್ರರಂಗದ ಅನ್ನ 45 ವರ್ಷದಿಂದ ತಿಂದು ಬೆಳೆದ ನಾನು ಅದರ ಋಣ ತೀರಿಸುವ ನನ್ನ ಯತ್ನಕ್ಕೆ ಚಿತ್ರರಂಗದ ಯಾರೊಬ್ಬರೂ ಬೆಂಬಲ ವ್ಯಕ್ತಪಡಿಸಲಿಲ್ಲ (ಭಾಮಾ ಹರೀಶ್, ಬಣಕಾರ್, ಯೂಟೂಬ್ ಅನಿಲ್ ಯಾದವ್ ಗೆಳೆಯರು ಹಾಗು ಕೋಣ ನಿರ್ಮಾಪಕರ ಸಹಕಾರ ಹೊರತುಪಡಿಸಿ) ಎಂಬ ದುಃಖ ಕಾಡಿತು. ಆದರೂ ಪರವಾಗಿಲ್ಲ ನನ್ನ ಜೀವನದ ಪ್ರತಿ ಘಟ್ಟದಲ್ಲಿಯೂ ನಾನು ಏಕಾಂಗಿ ಹೋರಾಟ ಮಾಡಿ ನನ್ನ ಕನ್ನಡದ ಜನರ ಆಶೀರ್ವಾದದಿಂದ ಗಟ್ಟಿನೆಲೆ ಪಡೆದು ಕಂಬದಂತೆ ನಿಂತಿರುವೆ.’
‘ನನ್ನ ಕೊನೆ ಉಸಿರಿನವರೆಗೂ ಉತ್ತಮ ಕಾರ್ಯಕ್ಕೆ ರಾಯರ ಆಶೀರ್ವಾದ ಪಡೆದು ನುಗ್ಗಿ ಕಾರ್ಯ ಮಾಡಿ ದೇವರು ಹಾಗು ದೇವರ ರೂಪದ ಜನರು ಮೆಚ್ಚುವಂತೆ ಬಾಳುವೆ. ಹರಸಿ ಹಾರೈಸಿ ಕನ್ನಡ ಚಿತ್ರರಂಗದ ಉಳಿವಿಗೆ’ ಎಂದು ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಅವರ ಕಾರ್ಯಕ್ಕೆ ಅಭಿಮಾನಿಗಳು ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಪೈರಸಿಯಿಂದಾಗಿ ಕನ್ನಡದ ಎಷ್ಟೋ ಸಿನಿಮಾಗಳಿಗೆ ತೊಂದರೆ ಆಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದ ‘ದಿ ಡೆವಿಲ್’ ಸಿನಿಮಾ ಪೈರಸಿ ಆಯಿತು. ಅದರಿಂದ ಚಿತ್ರತಂಡಕ್ಕೆ ನಷ್ಟ ಆಯಿತು. ಅಲ್ಲದೇ, ‘ಮಾರ್ಕ್’ ಮತ್ತು ‘45’ ಸಿನಿಮಾಗಳಿಗೂ ಪೈರಸಿಯಿಂದ ತೊಂದರೆ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಪೈರಸಿ ವಿರುದ್ಧ ಕಿಚ್ಚ ಸುದೀಪ್ ಅವರು ಗುಡುಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.