ಬಹುಭಾಷಾ ನಟಿ ಪ್ರಿಯಾ ಆನಂದ್ (Priya Anand) ಅವರು ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆ ‘ರಾಜಕುಮಾರ’ ಮತ್ತು ‘ಜೇಮ್ಸ್’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಪ್ರಿಯಾ ಆನಂದ್ ಅವರು ಕನ್ನಡದ ಪ್ರೇಕ್ಷಕರನ್ನು ರಂಜಿಸಿದರು. 36ರ ಪ್ರಾಯದ ಈ ಬೆಡಗಿಯ ಮದುವೆ (Marriage) ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಅಚ್ಚರಿ ಎಂದರೆ ಅವರು ನಿತ್ಯಾನಂದ ಜೊತೆ ಮದುವೆ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ವರದಿ ಆಗಿದೆ. ಅಷ್ಟಕ್ಕೂ ಅವರು ನಿತ್ಯಾನಂದ (Nithyananda) ಬಗ್ಗೆ ಆಸಕ್ತಿ ತೋರಿಸಿರುವುದು ಯಾಕೆ? ಇಲ್ಲಿದೆ ವಿವರ..
ನಿತ್ಯಾನಂದ ಬಗ್ಗೆ ಹಲವು ವಾದಗಳಿವೆ. ಅವರ ಮೇಲೆ ಅನೇಕ ಗಂಭೀರ ಆರೋಪಗಳಿವೆ. ಅದೇ ರೀತಿ ಅವರನ್ನು ಆರಾಧಿಸುವವರ ಸಂಖ್ಯೆಯೂ ದೊಡ್ಡದಿದೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಪ್ರಿಯಾ ಆನಂದ್ ಕೂಡ ಆಗೊಮ್ಮೆ ಈಗೊಮ್ಮೆ ನಿತ್ಯಾನಂದ ಅವರ ಹೇಳಿಕೆಗಳನ್ನು ಶೇರ್ ಮಾಡಿಕೊಂಡಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿರುವ ಅವರು ‘ನಾನು ನಿತ್ಯಾನಂದನನ್ನು ಮದುವೆ ಆಗಲು ಬಯಸಿದ್ದೇನೆ’ ಎಂದು ಹೇಳಿರುವ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ವರದಿ ಆಗಿದೆ.
‘ನಿತ್ಯಾನಂದ ಅವರ ಮೇಲೆ ಏನೇ ಅರೋಪಗಳು ಇರಬಹುದು. ಆದರೆ ಅವರನ್ನು ಅನೇಕ ಜನರು ಇಷ್ಟಪಡುತ್ತಾರೆ. ಹಾಗೆಂದಮೇಲೆ ಅವರಲ್ಲಿ ಏನೋ ವಿಶೇಷ ಗುಣ ಇರಲೇಬೇಕಲ್ಲವೇ? ನಾನು ಅವರನ್ನು ಮದುವೆ ಆದರೆ ಸರ್ನೇಮ್ ಕೂಡ ಬದಲಾಯಿಸಿಕೊಳ್ಳಬೇಕಿಲ್ಲ. ನಮ್ಮಿಬ್ಬರ ಹೆಸರು ಹೆಚ್ಚೂ-ಕಡಿಮೆ ಒಂದೇ ರೀತಿ ಇದೆ’ ಎಂದು ಪ್ರಿಯಾ ಆನಂದ್ ಹೇಳಿದ್ದಾರೆ.
ಪ್ರಿಯಾ ಆನಂದ್ ಹೇಳಿರುವ ಈ ಮಾತಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ನಿಜಕ್ಕೂ ಮದುವೆ ಆಗುವ ಉದ್ದೇಶದಿಂದ ಅವರು ಈ ರೀತಿ ಹೇಳಿದ್ದಾರಾ ಅಥವಾ ಕೇವಲ ತಮಾಷೆಗಾಗಿ ಇಂಥ ಹೇಳಿಕೆ ನೀಡಿದ್ದಾರಾ ಎಂಬ ಬಗ್ಗೆ ಸ್ವತಃ ಪ್ರಿಯಾ ಆನಂದ್ ಸ್ಪಷ್ಟನೆ ನೀಡಬೇಕಿದೆ.
Published On - 12:00 pm, Sun, 10 July 22