
ಕಾನ್ಫಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಜೆಸಿ ರಾಯ್ (JC Roy) ಇಂದು (ಜನವರಿ 30) ನಿಧನ ಹೊಂದಿದ್ದಾರೆ. ರಾಯ್ ಅವರು, ಪದೇ ಪದೇ ಆಗುತ್ತಿದ್ದ ಐಟಿ ದಾಳಿಗಳಿಂದ ಬೇಸತ್ತು ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಹತ್ತಿರದ ಬಂಧ ಇತ್ತು.
ರಾಯ್ ಅವರು ಉದ್ಯಮಿ ಮಾತ್ರವೇ ಅಲ್ಲದೆ ಸಿನಿಮಾ ನಿರ್ಮಾಪಕರೂ ಆಗಿದ್ದರು. ಮಲಯಾಳಂನಲ್ಲಿ ಮೋಹನ್ನಾಲ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯಾಸನೋವ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ರಾಯ್ ಅವರು 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರಂತೆ.
ಇನ್ನು ಟಿವಿ ಜಗತ್ತಿನೊಂದಿಗೆ ಅವರದ್ದು ಹತ್ತಿರದ ಬಂಧ. ಹಲವಾರು ರಿಯಾಲಿಟಿ ಶೋಗಳಿಗೆ ಅವರು ಪ್ರಮುಖ ಸ್ಪಾನ್ಸರ್ ಆಗಿದ್ದರು. ಬಿಗ್ಬಾಸ್ ಕನ್ನಡ 11ನೇ ಸೀಸನ್ಗೆ ಮೊದಲ ಬಹುಮಾನವಾದ 50 ಲಕ್ಷ ರೂಪಾಯಿಗಳನ್ನು ರಾಯ್ ಅವರೇ ನೀಡಿದ್ದರು. ಅದಕ್ಕೂ ಮುಂಚೆ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಸಿಂಗಿಂಗ್ ರಿಯಾಲಿಟಿ ಶೋಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಿದ್ದರು. ಮಲಯಾಳಂ ಬಿಗ್ಬಾಸ್ಗೂ ಸಹ ಸ್ಪಾನ್ಸರ್ ಆಗಿದ್ದರು ರಾಯ್. ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ಸೈಮಾಕ್ಕೆ ಎಂಟು ವರ್ಷಗಳ ಕಾಲ ಮುಖ್ಯ ಸ್ಪಾನ್ಸರ್ ಆಗಿದ್ದಿದ್ದು ರಾಯ್ ಅವರ ಕಾನ್ಫಿಡೆಂಟ್ ಗ್ರೂಪ್.
ಇದನ್ನೂ ಓದಿ:ಸಾವಿರಾರು ಕೋಟಿ ಒಡೆಯ ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?
ರಾಯ್ ಅವರು ರಿಯಾಲಿಟಿ ಶೋಗಳಿಗಷ್ಟೆ ಸ್ಪಾನ್ಸರ್ ಮಾಡುತ್ತಿದ್ದಿದ್ದಕ್ಕೂ ಕಾರಣವಿತ್ತು. ಅವರೇ ಹೇಳಿಕೊಂಡಿರುವಂತೆ, ‘ಧಾರಾವಾಹಿಗೆ ನಾನು ಪ್ರಾಯೋಜಕತ್ವ ನೀಡುತ್ತಿರಲಿಲ್ಲ, ಧಾರಾವಾಹಿಗಳು ಒಳ್ಳೆಯವೇ ಆದರೆ ನಮ್ಮದು ರಿಯಾಲಿಟಿ (ರಿಯಲ್ ಎಸ್ಟೇಟ್) ಕಂಪೆನಿ, ನನ್ನದು ರಿಯಲ್ ಕಂಪೆನಿ ಹಾಗಾಗಿ ನಾನು ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ಮಾಡುತ್ತಿದ್ದೆ. ಅದರಿಂದ ನಿಜವಾದ ಪ್ರತಿಭೆ ಇದ್ದವರಿಗೆ ಸಹಾಯ ಮಾಡಿದ ತೃಪ್ತಿ ನನಗೆ ಸಿಗುತ್ತಿತ್ತು, ಪ್ರತಿಭಾವಂತರಿಗೆ ಬೆಂಬಲ ನೀಡುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದರು ರಾಯ್.
‘ಹಲವಾರು ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ನೀಡಿದ್ದೇನೆ. ಆದರೆ ಒಮ್ಮೆ ಕೂಡ ಬಹುಮಾನದ ಮೊತ್ತ ನೀಡುವುದನ್ನು ನಾನು ತಡ ಮಾಡಿಲ್ಲ. ಹೇಳಿದ ಹಣವನ್ನು, ಹೇಳಿದ ದಿನದಂದು ನೀಡಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕೆಯೂ ನನ್ನ ಮೇಲೆ ಇಲ್ಲ’ ಎಂದು ರಾಯ್ ಹೇಳಿಕೊಂಡಿದ್ದರು. ಸಿನಿಮಾಗಳ ಬಗ್ಗೆ, ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ರಾಯ್ ಅವರು ಮ್ಯಾಜಿಕ್ ಟ್ರಿಕ್ಗಳನ್ನು ಸಹ ಮಾಡುತ್ತಿದ್ದರಂತೆ. ಕೆಲವು ಶೋಗಳನ್ನು ಸಹ ಬಹಳ ಮುಂಚೆ ನೀಡಿದ್ದರಂತೆ. ಆದರೆ ಮದುವೆಯ ಬಳಿಕ ಅದೆಲ್ಲವನ್ನೂ ಬಿಟ್ಟೆ ಎಂದಿದ್ದರು ರಾಯ್.
ರಾಯ್ ಅವರು ಕನ್ನಡ ಹಾಗೂ ಮಲಯಾಳಂ ಚಿತ್ರರಂಗದ ಹಲವರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದರು. ಕನ್ನಡದ ಸ್ಟಾರ್ ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಒಳ್ಳೆಯ ಸ್ನೇಹಿತರಾಗಿದ್ದರು. ಕಿಚ್ಚ ಸುದೀಪ್ ಅವರ ಆಪ್ತರೂ ಸಹ ಆಗಿದ್ದರು ರಾಯ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ