ಭೂಗತ ಲೋಕದಲ್ಲಿ ಜಯರಾಜ್ ಹೆಸರು ಕೇಳದವರೇ ಇಲ್ಲ. ಅವರ ಪುತ್ರ ಅಜಿತ್ ಜಯರಾಜ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅಜಿತ್ ಅವರ ಹೊಸ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’ ಸಿದ್ಧವಾಗುತ್ತಿದೆ. ಈ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಈ ಟೀಸರ್ ಮೂಲಕ ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ. ವಿನೋದ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ಅವರು ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರರಂಗದಲ್ಲಿ 2 ದಶಕಗಳ ಕಾಲ ಪ್ರಚಾರ ಕಾರ್ಯದ ಅನುಭವ ಇರುವ ಸುಗೂರು ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಸೂಗೂರು ಸಿನಿ ಪ್ರೊಡಕ್ಷನ್ಸ್’ ಮೂಲಕ ಚಿತ್ರ ನಿರ್ಮಾಣ ಆಗುತ್ತಿದೆ.
ಆನಂದರಾಜ್ ಅವರು ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು. ‘ಜಯರಾಜ್ ನಂತರದ ದಿನಗಳ ಸಂದರ್ಭದಲ್ಲಿ ಹಣಕಾಸು ವ್ಯವಹಾರ ಮತ್ತು ಮಾರ್ಕೆಟ್ ದಂಧೆ ರಾರಾಜಿಸುತ್ತಿತ್ತು. ಈ ರೀತಿಯ ವಿಷಯಗಳನ್ನು ಕೇಳಿದ್ದು, ನೋಡಿದ್ದು, ಓದಿದ್ದು ಎಲ್ಲವನ್ನೂ ಬಳಸಿಕೊಂಡು ಚಿತ್ರಕಥೆ ಬರೆಯಲಾಗಿದೆ’ ಎಂದು ನಿರ್ದೇಶಕರು ಹೇಳಿದರು.
ಇದನ್ನೂ ಓದಿ: ನಾನು ಕೊತ್ವಾಲ್ ರಾಮಚಂದ್ರ, ಜಯರಾಜ್ನ ಶಿಷ್ಯನಲ್ಲ; ಕಾಂಗ್ರೆಸ್ ಟ್ವೀಟ್ಗೆ ಸಿ.ಟಿ.ರವಿ ತಿರುಗೇಟು
‘ಜಯರಾಜ್ ಮಗನೇ ಈ ಸಿನಿಮಾದಲ್ಲಿ ಪಾತ್ರವಾಗಿ ಬರುತ್ತಾರೆ. ಆಗಿನ ಕಾಲಘಟ್ಟದಲ್ಲಿ ಇದ್ದಂತಹ ಪಾತ್ರಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ. ಜತೆಗೆ ತಾಯಿ ಸೆಂಟಿಮೆಂಟ್ ಕೂಡ ಇದೆ. ಪ್ರೀತಿಯ ಸನ್ನಿವೇಶಗಳ ಜೊತೆ ಗೆಳತನ ಸಹ ಈ ಕಥೆಯಲ್ಲಿ ಇದೆ. ಆ ಕಾಲದ ಬೆಂಗಳೂರು ಹೇಗಿತ್ತು ಎಂಬುದು ತಿಳಿಯಬೇಕಾದರೆ ನಮ್ಮ ಸಿನಿಮಾ ನೋಡಿ. 1989ರ ಅವಧಿಯು ಮಾತ್ರವಲ್ಲದೇ ಈಗಿನ ಕಾಲದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದು ಕೂಡ ಇರಲಿದೆ’ ಎಂದಿದ್ದಾರೆ ನಿರ್ದೇಶಕರು.
ನಿವಿಷ್ಕ ಪಾಟೀಲ್, ಪಟ್ರೋಲ್ ಪ್ರಸನ್ನ, ರಾಜವರ್ಧನ್, ಶರತ್ ಲೋಹಿತಾಶ್ವ, ಕಿಶನ್, ಸೋನು ಪಾಟೀಲ್, ಮೈಕೋ ನಾಗರಾಜ್, ಸಚ್ಚಿನ್ ಪುರೋಹಿತ್ ಮುಂತಾದವರು ಕೂಡ ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ. ಡೈರೆಕ್ಟರ್ ಹೇಳಿದಾಗ ಮೊದಲು ಓಕೆ ಅಂದಿದ್ದೆ. ಆದರೆ ಕ್ಯಾಮೆರಾ ಮುಂದೆ ನಿಂತಾಗ ನಡುಕ ಬಂತು’ ಎಂದರು ಅಜಿತ್ ಜಯರಾಜ್. ವಿಜೇತ್ ಮಂಜಯ್ಯ ಅವರ ಸಂಗೀತ ನಿರ್ದೇಶನ, ಅರ್ಜುನ್ ಆಕೋಟ್ ಅವರ ಛಾಯಾಗ್ರಹಣ, ಅಲೆಕ್ಸ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.