ಡಾ. ರಾಜ್​, ಅಂಬರೀಷ್​ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್​ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್

|

Updated on: Jun 19, 2021 | 11:42 AM

ಡಾ. ರಾಜ್​ಕುಮಾರ್​ ಭವನ, ಡಾ. ಅಂಬರೀಷ್​ ಆಡಿಟೋರಿಯಂ ಎಂದು ಬರೆದಿದೆ. ಆದರೆ ಅಲ್ಲಿ ‘ಸಾಹಸಿ ಸಿಂಹ’ ವಿಷ್ಣುವರ್ಧನ್​ ಅವರ ಹೆಸರು ಇಲ್ಲದೇ ಇರುವುದು ಬಹಳ ಬೇಸರ ತಂದಿದೆ ಎಂದು ಅನಿರುದ್ಧ್​ ಹೇಳಿದ್ದಾರೆ.

ಡಾ. ರಾಜ್​, ಅಂಬರೀಷ್​ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್​ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್
ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್
Follow us on

ಸ್ಮಾರಕ ನಿರ್ಮಾಣದಿಂದ ಹಿಡಿದು, ಕಲಾವಿದರ ಸಂಘದ ಕಟ್ಟಡಕ್ಕೆ ಹೆಸರು ಇಡುವುದರವರೆಗೆ ಅನೇಕ ವಿಚಾರಗಳಲ್ಲಿ ‘ಸಾಹಸ ಸಿಂಹ’ ವಿಷ್ಣುವರ್ಧನ್​ ಅವರನ್ನು ಕಡೆಗಣಿಸಲಾಗಿದೆ. ಈ ಬಗ್ಗೆ ಅವರ ಕುಟುಂಬದವರು ಅನೇಕ ಬಾರಿ ಧ್ವನಿ ಎತ್ತಿದ್ದುಂಟು. ಈಗ ವಿಷ್ಣುವರ್ಧನ್​ ಅವರ ಅಳಿಯ, ನಟ ಅನಿರುದ್ಧ್​ ಮತ್ತೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ವಿಷ್ಣುವರ್ಧನ್​ ಹೆಸರು ಕಾಣದೇ ಇರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದ ಮೇಲೆ ಇಬ್ಬರು ಧೀಮಂತರ ಹೆಸರು ಬರೆದಿದ್ದಾರೆ. ಡಾ. ರಾಜ್​ಕುಮಾರ್​ ಭವನ, ಡಾ. ಅಂಬರೀಷ್​ ಆಡಿಟೋರಿಯಂ ಎಂದು ಬರೆದಿದೆ. ಬಹಳ ಸಂತೋಷ ಆಯಿತು. ತುಂಬ ಹಿರಿಯ ಕಲಾವಿದರು, ದಿಗ್ಗಜರ ಹೆಸರನ್ನು ಇಟ್ಟಿರುವುದು ಅತ್ಯಂತ ಸೂಕ್ತ. ಆದರೆ ಅಲ್ಲಿ ಸಾಹಸಿ ಸಿಂಹ ವಿಷ್ಣುವರ್ಧನ್​ ಅವರ ಹೆಸರು ಇಲ್ಲದೇ ಇರುವುದು ಬಹಳ ಬೇಸರ ತಂದಿದೆ’ ಎಂದು ಅನಿರುದ್ಧ್​ ಮಾತು ಆರಂಭಿಸಿದ್ದಾರೆ.

‘ಇದರ ಬಗ್ಗೆ ನಮ್ಮ ಕಲಾವಿದರನ್ನು ಪ್ರಶ್ನಿಸಲಾ ಎಂದು ಭಾರತಿ ವಿಷ್ಣುವರ್ಧನ್​ ಬಳಿ ನಾನು ಕೇಳಿದೆ. ಅವರು ಬೇಡ ಎಂದು ಹೇಳಿದರು. ಅಧಿಕಾರಿಗಳಿಗೆ ಇಂದಲ್ಲ ನಾಳೆ ಗಮನಕ್ಕೆ ಬರಬಹುದು ಎಂದರು. ತುಂಬ ವರ್ಷಗಳೇ ಕಳೆದರೂ ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಅಭಿಮಾನಿಗಳು ಕೂಡ ಕರೆ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ. ನಾವಾಗೇ ಕೇಳುವುದು ನನಗೆ ಮುಜುಗರ ತರುತ್ತದೆ. ಆದರೆ ಕೇಳಲೇಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ವಿಷ್ಣುವರ್ಧನ್​ಗೆ ಸಿಗಬೇಕಾದ ಗೌರವ ಸಿಗುವುದೇ ಇಲ್ಲವೇನೂ ಎನಿಸುತ್ತದೆ’ ಎಂದು ಅನಿರುದ್ಧ್​ ಹೇಳಿದ್ದಾರೆ.

‘ನಿಮಗೆ ಅನೇಕ ಪ್ರಶಸ್ತಿ ಬರಬೇಕಿತ್ತಲ್ಲ ಎಂದು ವಿಷ್ಣುವರ್ಧನ್​ ಅವರಿಗೆ ನಾನು ಒಮ್ಮೆ ಕೇಳಿದ್ದೆ. ಆದರೆ ನಾವು ಏನನ್ನೂ ನಿರೀಕ್ಷೆ ಮಾಡಬಾರದು ಎಂದು ಅವರು ಹೇಳಿದ್ದರು. ಆದರೆ ಒಬ್ಬ ಕುಟುಂಬದ ಸದಸ್ಯನಾಗಿ, ಅಭಿಮಾನಿಯಾಗಿ ನನಗೆ ಅನಿಸುವುದು ಏನೆಂದರೆ ಅವರಿಗೆ ಸಿಗಬೇಕಾದ ಗೌರವ ಸಿಗಲೇಬೇಕು’ ಎಂದು ಅನಿರುದ್ಧ್ ಒತ್ತಾಯಿಸಿದ್ದಾರೆ.

‘ಯಾವುದೇ ಒಂದು ಸ್ಥಳಕ್ಕೆ ವಿಷ್ಣುವರ್ಧನ್​ ಹೆಸರು ಇಲ್ಲ ಎಂಬುದು ಬೇಸರದ ವಿಷಯ. ಅವರು ಯಾವುದಕ್ಕೂ ಅಧ್ಯಕ್ಷರಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳಬಹುದು. ಆದರೆ ಅವರು ಅನೇಕ ಬಾರಿ ಮುಂದಾಳತ್ವ ವಹಿಸಿದ್ದರು. ಅವರು ನಿಮಗೆ ಕಾಣುವುದೇ ಇಲ್ಲವಾ? ಅವರು ನಿಮ್ಮ ನೆನಪಿಗೆ ಬರುವುದೇ ಇಲ್ಲವಾ? ಇದನ್ನು ನಾವು ಕೇಳಿಕೊಳ್ಳಬೇಕಾ? ಇಂಥಕ್ಕಿಂತ ದುರಂತ ಇನ್ನೇನಿದೆ’ ಎಂದು ಅನಿರುದ್ಧ್​ ಪ್ರಶ್ನೆ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ