ಕೆ ಶಿವರಾಮ್ ನಿಧನಕ್ಕೆ ಕಾರಣವೇನು? ಅಂತಿಮ ದರ್ಶನ ಎಲ್ಲಿ?
K Shivaram: ಮಾಜಿ ಐಎಎಸ್ ಅಧಿಕಾರಿ, ಸಿನಿಮಾ ನಟ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದ ಕೆ ಶಿವರಾಮ್ ಇಂದು ನಿಧನರಾಗಿದ್ದು, ಅವರ ಅಂತಿಮ ದರ್ಶನದ ಸ್ಥಳ, ಸಮಯ ಇತ್ಯಾದಿ ಮಾಹಿತಿ ಇಲ್ಲಿದೆ.
ಮಾಜಿ ಐಎಎಸ್ ಅಧಿಕಾರಿ, ಸಿನಿಮಾ ನಟ ಕೆ ಶಿವರಾಮ್ (K Shivaram) ಇಂದು (ಫೆಬ್ರವರಿ 29) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಶಿವರಾಮ್ ಅವರ ನಿಧನದ ಬಗ್ಗೆ ಇಂದು ಬೆಳಿಗ್ಗೆಯಿಂದಲೂ ಸುದ್ದಿಗಳು ಹರಿದಾಡುತ್ತಲೇ ಇತ್ತು. ಇದೀಗ ಶಿವರಾಮ್ ಅವರ ಅಳಿಯ, ನಟ ಪ್ರದೀಪ್ ಅವರು ಶಿವರಾಮ್ ನಿಧನದ ಸುದ್ದಿಯನ್ನು ಖಾತ್ರಿಪಡಿಸಿದ್ದು, ಶಿವರಾಮ್ ಅಗಲಿಕೆ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಬೇಸರದಿಂದಲೇ ಹಂಚಿಕೊಂಡಿದ್ದಾರೆ.
‘ಇಂದು ಸಂಜೆ 4:18ಕ್ಕೆ ಕೆ ಶಿವರಾಮ್ ಅವರು ನಿಧನ ಹೊಂದಿದ್ದಾರೆ. ಶಿವರಾಮ್ ಅವರನ್ನು ಫೆಬ್ರವರಿ 3 ರಂದು ರಕ್ತದೊತ್ತಡ ವ್ಯತ್ಯಯವಾದ ಕಾರಣ ಅವರನ್ನು ಎಚ್ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ಇಂದು ಮತ್ತೆ ಅವರಿಗೆ ಹೃದಯಾಘಾತವಾಗಿದ್ದು ಅವರು ನಿಧನ ಹೊಂದಿದ್ದಾರೆ’ ಎಂದಿದ್ದಾರೆ ಪ್ರದೀಪ್.
ಇದನ್ನೂ ಓದಿ:ಹಿರಿಯ ನಟ ಕೆ ಶಿವರಾಮ್ಗೆ ಅನಾರೋಗ್ಯ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
‘ಶಿವರಾಮ್ ಅವರು ಕರ್ನಾಟಕದ ಮೇರು ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅತ್ಯುತ್ತಮ ನಟರಾಗಿದ್ದರು. ಜೊತೆಗೆ ದಕ್ಷ ಐಎಎಸ್ ಅಧಿಕಾರಿಗಳೂ ಸಹ ಆಗಿದ್ದರು. ಶಿವರಾಮ್ ಅವರ ಪಾರ್ಥಿವ ಶರೀರವನ್ನು ಇಂದು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಾಳೆ (ಮಾರ್ಚ್ 1) ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿನಿಮಾ ರಂಗ, ರಾಜಕೀಯ ರಂಗ ಹಾಗೂ ಆಡಳಿತ ವಿಭಾಗದಲ್ಲಿ ಅಪಾರ ಗೆಳೆಯರು, ಅಭಿಮಾನಿಗಳನ್ನು ಶಿವರಾಮ್ ಅವರು ಹೊಂದಿದ್ದರು. ಅವರೆಲ್ಲರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 1 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಶಿವರಾಮ್ ಅವರ ಪತ್ನಿ ಮಲೆ ಮಹದೇಶ್ವರ ದೇವಾಲಯಕ್ಕೆ ತೆರಳಿದ್ದಾರೆ. ಅವರು ಮರಳಿದ ಬಳಿಕ ಶಿವರಾಮ್ ಅವರ ಅಂತಿಮ ಸಂಸ್ಕಾರ ಎಲ್ಲಾಗಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದಿದ್ದಾರೆ ಪ್ರದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ