‘ಕಬ್ಜ’ ಸಿನಿಮಾ (Kabzaa Movie) ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಚಿತ್ರದ ಒಟ್ಟಾರೆ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ನಿರ್ಮಾಪಕ ಹಾಗೂ ನಿರ್ದೇಶಕ ಆರ್. ಚಂದ್ರು (R Chandru) ಅವರ ಜೇಬು ತುಂಬಿದೆ. ಚಿತ್ರದ ಟಿವಿ ಹಾಗೂ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಈಗ ಚಿತ್ರದ ಕಲೆಕ್ಷನ್ ಕೂಡ ಜೋರಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲಿ ‘ಕಬ್ಜ’ ಉತ್ತಮ ಗಳಿಕೆ ಮಾಡುತ್ತಿದೆ. ಈ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
‘ಕೆಜಿಎಫ್ 2’, ‘777 ಚಾರ್ಲಿ’, ‘ಕಾಂತಾರ’ ಸಿನಿಮಾಗಳು ಅಬ್ಬರದ ಕಲೆಕ್ಷನ್ ಮಾಡಿದ್ದವು. ಈ ಚಿತ್ರಗಳಿಂದ ಕನ್ನಡ ಸಿನಿಮಾ ಹಿರಿಮೆ ಹೆಚ್ಚಾಗಿದೆ. ಈಗ ‘ಕಬ್ಜ’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೊದಲ ದಿನದ ಒಟ್ಟಾರೆ ಕಲೆಕ್ಷನ್ 54-55 ಕೋಟಿ ರೂಪಾಯಿ ಆಗಿದೆ ಎಂದು ತಂಡ ಹೇಳಿಕೊಂಡಿದೆ. ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಹಲವು ಥಿಯೇಟರ್ಗಳಲ್ಲಿ ‘ಕಬ್ಜ’ ತೆರೆಕಂಡಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿದೆ. ಕರ್ನಾಟಕವೊಂದರಲ್ಲೇ ಈ ಚಿತ್ರ 20 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಭಾಷೆಯಿಂದ ಚಿತ್ರಕ್ಕೆ 12 ಕೋಟಿ ರೂಪಾಯಿ ಹರಿದು ಬಂದಿದೆ. ತೆಲುಗು ಭಾಷೆಯಿಂದ 7 ಕೋಟಿ ರೂಪಾಯಿ, ತಮಿಳಿನಿಂದ 5 ಕೋಟಿ ರೂಪಾಯಿ, ಮಲಯಾಳಂನಿಂದ 3 ಕೋಟಿ ರೂಪಾಯಿ ಹಾಗೂ ವಿದೇಶದಿಂದ 8 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಗಳಿಕೆ 55 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
‘ಕಬ್ಜ’ ಸಿನಿಮಾ ಭರ್ಜರಿ ಓಪನಿಂಗ್ ಪಡೆಯಿತು. ಈ ಚಿತ್ರಕ್ಕೆ ಯಾವುದೇ ಫ್ಯಾನ್ಶೋ ಇರಲಿಲ್ಲ. ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಿನಿಮಾ ಶೋ ಆರಂಭಗೊಂಡಿತು. ಸಿನಿಮಾ ಬಗ್ಗೆ ಒಳ್ಳೆಯ ಟಾಕ್ ಶುರುವಾಗಿದ್ದರಿಂದ ಬಹುತೇಕ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡವು. ಇದರಿಂದ ಸಿನಿಮಾದ ಮೊದಲ ದಿನದ ಗಳಿಕೆ ಜೋರಾಗಿದೆ.
ಇಂದು (ಮಾರ್ಚ್ 18) ಹಾಗೂ ನಾಳೆ (ಮಾರ್ಚ್ 19) ವೀಕೆಂಡ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ, ಸಿನಿಮಾ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಮುಂದಿನ ಬುಧವಾರ (ಮಾರ್ಚ್ 22) ಯುಗಾದಿ ಹಬ್ಬ ಇದ್ದು, ಆ ಪ್ರಯುಕ್ತ ಸರ್ಕಾರಿ ರಜೆ ಇದೆ. ಅದು ಕೂಡ ಚಿತ್ರಕ್ಕೆ ವರದಾನವಾಗಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಇದು ಕೂಡ ಚಿತ್ರಕ್ಕೆ ಸಹಕಾರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ