Kabzaa: ಕಬ್ಜ ಸಿನಿಮಾ ಟಿಕೆಟ್ ಬುಕಿಂಗ್ ಆರಂಭ ಆದರೆ ಬೆಂಗಳೂರಿನಲ್ಲಲ್ಲ!

ಮಾರ್ಚ್ 17 ರಂದು ಬಿಡುಗಡೆ ಆಗಲಿರುವ 'ಕಬ್ಜ' ಸಿನಿಮಾದ ಆನ್​ಲೈನ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಆದರೆ ಬೆಂಗಳೂರಿನಲ್ಲಲ್ಲ, ಬೆಂಗಳೂರಿನ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಇನ್ನಷ್ಟು ದಿನ ಕಾಯಬೇಕಿದೆ.

Kabzaa: ಕಬ್ಜ ಸಿನಿಮಾ ಟಿಕೆಟ್ ಬುಕಿಂಗ್ ಆರಂಭ ಆದರೆ ಬೆಂಗಳೂರಿನಲ್ಲಲ್ಲ!
ಕಬ್ಜ

Updated on: Mar 10, 2023 | 9:50 PM

ಕನ್ನಡ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾ ಕಬ್ಜ (Kabzaa) ಬಿಡುಗಡೆ ಆಗಲು ಕೆಲವು ದಿನಗಳಷ್ಟೆ ಬಾಕಿ. ಮುಂದಿನ ಶುಕ್ರವಾರ ಸಿನಿಮಾ ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ. ಸಿನಿಮಾಕ್ಕಾಗಿ ಅದ್ಧೂರಿ ಪ್ರಚಾರವನ್ನು ಚಿತ್ರವನ್ನು ಮಾಡುತ್ತಿದೆ. ಉಪ್ಪಿ ಅಭಿಮಾನಿಗಳು ಸಹ ಮೊದಲ ದಿನ, ಮೊದಲ ಶೋ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಟಿಕೆಟ್ ಆನ್​ಲೈನ್ ಬುಕಿಂಗ್ (Online Booking) ಆರಂಭವಾಗಿದೆ ಆದರೆ ಬೆಂಗಳೂರಿನಲ್ಲಲ್ಲ!

ಹೌದು, ಮಾರ್ಚ್ 17 ರಂದು ಬಿಡುಗಡೆ ಆಗಲಿರುವ ಕಬ್ಜ ಸಿನಿಮಾದ ಆನ್​ಲೈನ್ ಟಿಕೆಟ್ ಬುಕಿಂಗ್ ಏಳು ದಿನಗಳ ಮುಂಚೆಯೇ ಆರಂಭವಾಗಿದೆಯಾದರೂ ಬೆಂಗಳೂರಿಗರು ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಇನ್ನೂ ತುಸು ಕಾಯಬೇಕಾಗಿದೆ. ಬೆಂಗಳೂರಿಗಿಂತಲೂ ಮೊದಲು ಹೈದರಾಬಾದ್​ನಲ್ಲಿ ಕಬ್ಜ ಸಿನಿಮಾಕ್ಕೆ ಆನ್​ಲೈನ್ ಟಿಕೆಟ್ ಬುಕಿಂಗ್ ತೆರೆಯಲಾಗಿದೆ.

ಹೈದರಾಬಾದ್​ನ ಕುಕಟ್​ಪಲ್ಲಿ ಏರಿಯಾದ ವಿಶ್ವನಾಥ ಹೆಸರಿನ ಚಿತ್ರಮಂದಿರದಲ್ಲಿ ಕಬ್ಜ ಸಿನಿಮಾದ ಆನ್​ಲೈನ್ ಬುಕಿಂಗ್ ತೆರೆಯಲಾಗಿದೆ. ಸದ್ಯಕ್ಕೆ ಹೈದರಾಬಾದ್​ನ ಈ ಒಂದು ಚಿತ್ರಮಂದಿರದಲ್ಲಿ ಮಾತ್ರವೇ ಟಿಕೆಟ್ ಬುಕ್ ಮಾಡಬಹುದಾಗಿದೆ. ನಾಳೆಯಿಂದ ಇಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಳವಾಗಲಿವೆ. ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇನ್ನೆರಡು ದಿನಗಳಲ್ಲಿ ಆನ್​ಲೈನ್ ಟಿಕೆಟ್ ಬುಕಿಂಗ್ ಓಪನ್ ಆಗುವ ನಿರೀಕ್ಷೆ ಇದೆ.

ತೆಲುಗು ಚಿತ್ರರಂಗದ ಜನಪ್ರಿಯ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ಅರುಗಳು ಕಬ್ಜ ಸಿನಿಮಾದ ತೆಲುಗು ಆವೃತ್ತಿಯನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ತೆಲುಗಿನ ಕೆಲವು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದು, ತೆಲುಗು ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಕಬ್ಜ ಸಿನಿಮಾ ತೆಲುಗು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಇನ್ನು ಕೇರಳ ರಾಜ್ಯದಲ್ಲಿ ಕಬ್ಜ ಸಿನಿಮಾವನ್ನು ಎಲ್​ಜಿಎಫ್ ಹೆಸರಿನ ವಿತರಣಾ ಸಂಸ್ಥೆ ವಿತರಿಸುತ್ತಿದೆ. ಈ ಹಿಂದೆ ಕೆಜಿಎಫ್ 2, 777 ಚಾರ್ಲಿ, ಕಾಂತಾರ ಸಿನಿಮಾಗಳು ಕೇರಳದಲ್ಲಿ ಚೆನ್ನಾಗಿ ಪ್ರದರ್ಶನ ಕಂಡಿದ್ದವಾದ್ದರಿಂದ ಈ ಸಿನಿಮಾ ಸಹ ಚೆನ್ನಾಗಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

ತಮಿಳುನಾಡಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ, ಕನ್ನಡದ ಕಬ್ಜ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಆರ್​ಆರ್​ಆರ್, ಪುಷ್ಪ, ಸೀತಾ ರಾಮಂ ಅಂಥಹಾ ಸಿನಿಮಾಗಳನ್ನು ವಿತರಣೆ ಮಾಡಿರುವ ಜೊತೆಗೆ, ರಜನೀಕಾಂತ್, ವಿಕ್ರಂ, ಸೂರ್ಯ, ಚಿರಂಜೀವಿ, ಧನುಶ್, ವಿಜಯ್, ಅಕ್ಷಯ್ ಕುಮಾರ್ ಅಂಥಹಾ ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹಿರಿಮೆ ಈ ಸಂಸ್ಥೆಗಿದೆ.

ಇನ್ನು ಹಿಂದಿಯಲ್ಲಿ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ಅವರು ಸಿನಿಮಾದ ವಿತರಣೆ ಮಾಡಲಿದ್ದಾರೆ. ಮುಂಬೈನಲ್ಲಿ ಚಿತ್ರತಂಡದ ಜೊತೆ ಸತತವಾಗಿ ಪ್ರಚಾರ ಮಾಡಿದ್ದಾರೆ ಆನಂದ್ ಪಂಡಿತ್. ಸಿನಿಮಾವು ಮಾರ್ಚ್ 17 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ