Savarkar: ಸಾವರ್ಕರ್ ಪಾತ್ರದಲ್ಲಿ ಸುನಿಲ್ ರಾವ್, ಫಸ್ಟ್ ಲುಕ್ ಬಿಡುಗಡೆ
ವಿನಾಯಕ ದಾಮೋದರ್ ಸಾವರ್ಕರ್ ಕುರಿತಾದ ಸಿನಿಮಾ ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಸಾವರ್ಕರ್ ಪಾತ್ರದಲ್ಲಿ ಸುನಿಲ್ ರಾವ್ ನಟಿಸಲಿದ್ದಾರೆ. ಸಾವರ್ಕರ್ ಪಾತ್ರದ ಫಸ್ಟ್ ಲುಕ್ ಇದೀಗ ಬಿಡುಗಡೆ ಆಗಿದೆ.
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ (Savarkar) ಕುರಿತಾದ ಸಿನಿಮಾ ಕನ್ನಡದಲ್ಲಿ ಬರುತ್ತಿರುವುದಾಗಿಯೂ, ಸಾವರ್ಕರ್ ಪಾತ್ರದಲ್ಲಿ ನಟ ಸುನಿಲ್ ರಾವ್ (Sunil Rao) ನಟಿಸುತ್ತಿರುವುದಾಗಿಯೂ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ಸುನೀಲ್ ರಾವ್ ನಿರ್ವಹಿಸುತ್ತಿರುವ ಪಾತ್ರದ ಮೊದಲ ಲುಕ್ ಬಿಡುಗಡೆ ಆಗಿದ್ದು, ಸಾವರ್ಕರ್ ವೇಷದಲ್ಲಿ ಸುನಿಲ್ ಗಮನ ಸೆಳೆದಿದ್ದಾರೆ.
ಕಪ್ಪು ಕೋಟು, ಕಪ್ಪು ಟೋಪಿ ಧರಿಸಿ, ಒಂದು ಕೈಯಲ್ಲಿ ಬಂದೂಕು ಮತ್ತೊಂದು ಕೈಯಲ್ಲಿ ಪೆನ್ನು ಹಿಡಿದಿರುವ ಸುನಿಲ್ ರಾವ್ ಬಹುತೇಕ ಸಾರ್ವಕರ್ ರೀತಿಯಲ್ಲಿಯೇ ಕಾಣುತ್ತಿದ್ದಾರೆ. ಇನ್ನೊಂದು ಲುಕ್ ಸಹ ಬಿಡುಗಡೆ ಆಗಿದ್ದು, ಅಂಡಮಾನ್ ಜೈಲಿನಲ್ಲಿ ಸಾರ್ವಕರ್ ಇದ್ದಾಗಿನ ಚಿತ್ರವನ್ನು ಹೋಲುವ ಪೋಸ್ಟರ್ ಅದಾಗಿದೆ. ಜೈಲುಡುಗೆ ತೊಟ್ಟು ತಲೆಯ ಮೇಲೆ ಕಪ್ಪು ಕಂಬಳಿ ಹೊತ್ತಿರುವ ಸುನಿಲ್ ರಾವ್ ಮುಖಭಾವ ಗಮನ ಸೆಳೆಯುತ್ತಿದೆ.
ಪ್ರೇಮಕತೆಗಳು, ಹಾಸ್ಯ ಕತೆಗಳಲ್ಲಿ ನಟಿಸುತ್ತಾ ಬಂದಿರುವ ಸುನಿಲ್ ರಾವ್ಗೆ ಇದು ಮೊದಲ ಬಯೋಪಿಕ್ ಸಿನಿಮಾ ಆಗಿದ್ದು, ಸಿನಿಮಾವನ್ನು ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿರುವುದಾಗಿ ನಿರ್ದೇಶಕ ರಾಧಾಕೃಷ್ಣ ಹೇಳಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 12 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಟೀಸರ್ ಬಿಡುಗಡೆ ಮುಂದೂಡಲಾಗಿದೆ.
ಸಿನಿಮಾದ ಚಿತ್ರೀಕರಣಕ್ಕೆ ಚಿತ್ರತಂಡ ರೆಡಿಯಾಗಿದ್ದು, ಮಾರ್ಚ್ 25 ರಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಸಾವರ್ಕರ್ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ಘಟನೆಗಳ ದೃಶ್ಯಗಳನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗುತ್ತದೆ. ಸಾವರ್ಕರ್ ಕುರಿತಾಗಿ ಇರುವ ಅನುಮಾನಗಳಿಗೆ ಈ ಸಿನಿಮಾ ಉತ್ತರ ನೀಡಲಿದೆ ಎಂಬುದು ನಿರ್ದೇಶಕರ ಮಾತು.
ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ಪೋಷಕ ನಟ ಅನುಪಮ್ ಖೇರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಸಾವರ್ಕರ್ ಸಿನಿಮಾದಲ್ಲಿಯೂ ನಟಿಸಿದರೆ ಇದು ಅವರ ಎರಡನೇಯ ಕನ್ನಡ ಸಿನಿಮಾ ಆಗುತ್ತದೆ.
ಸಿನಿಮಾದ ಪಾತ್ರಕ್ಕಾಗಿ ಮಾಡಿಕೊಂಡಿರುವ ತಯಾರಿ ಬಗ್ಗೆ ಮಾತನಾಡಿದ್ದ ನಟ ಸುನಿಲ್ ರಾವ್, ಈ ಸಿನಿಮಾಕ್ಕಾಗಿ ತಯಾರಾಗುತ್ತಿದ್ದೇನೆ. ಕತೆಗೆ ಅನುಗುಣವಾಗಿ ನಾನು ನನ್ನ ದೇಹದ ಆಕಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆದರೆ ಅತಿಯಾದ ಟ್ರಾನ್ಸ್ಫರ್ಮೇಷನ್ ಬೇಡವೆಂದು ನಿರ್ದೇಶಕರು ಹೇಳಿದ್ದಾರೆ ಹಾಗಾಗಿ ಚಿತ್ರೀಕರಣದ ಸಮಯದಲ್ಲಿ ಬಾಡಿ ಬಿಲ್ಡ್ ಮಾಡಿಕೊಳ್ಳಲಿದ್ದೇನೆ. ಇದು ನನ್ನ ಮೊದಲ ಬಯೋಪಿಕ್ ಸಿನಿಮಾ. ನಟನಾಗಿ ಒಳ್ಳೆಯ ಕತೆ, ಪಾತ್ರಗಳಲ್ಲಿ ನಟಿಸುವ ಆಸೆಯಿದ್ದೇ ಇರುತ್ತದೆ, ಅಂತೆಯೇ ರಾಧಾಕೃಷ್ಣ ಅವರು ಈ ಆಫರ್ ನೀಡಿದಾಗ ಕೂಡಲೇ ಒಪ್ಪಿಕೊಂಡೆ” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Fri, 10 March 23