ಡೆಲಿವರಿ ಬಾಯ್ ಕಾಮರಾಜ್ ವರ್ಸಸ್ ಹಿತೇಶಾ ಚಂದ್ರಾಣಿ ಪ್ರಕರಣ ಈಗ ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಯಾರದ್ದು ಸರಿ, ಯಾರದ್ದು ತಪ್ಪು ಎಂಬ ಬಗ್ಗೆ ಸೋಷಿಯಲ್ ಮೀಡಿಯಾ ತುಂಬೆಲ್ಲ ವಾದ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದ ನಟ ‘ದುನಿಯಾ’ ವಿಜಯ್ ಕೂಡ ಈ ಚರ್ಚೆಗೆ ಧ್ವನಿಗೂಡಿಸಿದ್ದಾರೆ.
‘ಸುಮಾರು 4 ದಿನಗಳಿಂದ ಸುದ್ದಿಯಲ್ಲಿರುವ Zomato ಹುಡುಗ ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ. ಕರ್ನಾಟಕ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ ಆತನ ಬೆಂಬಲಕ್ಕೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲೋಣ. ಯಾವುದೇ ಕಾರಣಕ್ಕೂ ಆತನಿಗೆ ಅನ್ಯಾಯ ಆಗಬಾರದು ಎಂದು ಬಯಸುತ್ತೇನೆ. ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇರುವುದರಿಂದ ಈತನ ದೂರನ್ನು ಸಹ ಪರಿಗಣಿಸಿ, ಅದರಲ್ಲೂ ಸಹ ತನಿಖೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ. ಕಾಮರಾಜ್ ಪರವಾಗಿ ನಿಂತಿರುವ ರೂಪೇಶ್ ರಾಜಣ್ಣ ಅವರಿಗೆ ನನ್ನ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು’ ಎಂದು ದುನಿಯಾ ವಿಜಯ್ ಪೋಸ್ಟ್ ಮಾಡಿದ್ದಾರೆ.
ತಮ್ಮ ಮೇಲೆ ಕಾಮರಾಜ್ ಹಲ್ಲೆ ಮಾಡಿದ್ದಾರೆ ಎಂದು ಹಿತೇಶಾ ಚಂದ್ರಾಣಿ ಆರೋಪ ಮಾಡಿದ ಬಳಿಕ ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಿತು. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಪರಿಣೀತಿ ಚೋಪ್ರಾ ಅವರು ಟ್ವಿಟರ್ ಮೂಲಕ ಕಾಮರಾಜ್ ಪರವಾಗಿ ಮಾತನಾಡಿದ್ದರು.
‘ಈ ಫುಡ್ ಡೆಲಿವರಿ ಬಾಯ್ ಮುಗ್ಧ ಎಂದು ನಾನು ನಂಬುತ್ತೇನೆ. ಆದರೆ ನೀವು ಸತ್ಯವನ್ನು ಕಂಡುಹಿಡಿದರೆ ನಾವೂ ಆ ಮಹಿಳೆಯನ್ನು ಪ್ರಶ್ನೆ ಮಾಡಬಹುದು. ನಿಜಕ್ಕೂ ಇದೊಂದು ಅಮಾನವೀಯ, ನಾಚಿಕೆಗೇಡು ಮತ್ತು ದುಃಖ ತರುವ ಘಟನೆ ಎನ್ನಿಸುತ್ತಿದೆ. ನನ್ನಿಂದ ಏನು ಸಹಾಯಬೇಕೋ ಅದನ್ನು ಮಾಡುತ್ತೇನೆ. ದಯವಿಟ್ಟು ಸತ್ಯವನ್ನು ಆದಷ್ಟು ಬೇಗ ಅನ್ವೇಷಿಸಿ’ ಎಂದು ಟ್ವಿಟರ್ನಲ್ಲಿ ಪರಿಣಿತಿ ಚೋಪ್ರಾ ಜೊಮ್ಯಾಟೊ ಇಂಡಿಯಾಕ್ಕೆ ಒತ್ತಾಯಿಸಿದ್ದಾರೆ.
ಜೊಮ್ಯಾಟೋ ಪ್ರಕರಣ: ಹಿತೇಶಾ ಚಂದ್ರಾಣಿ ವಿರುದ್ಧ ಡೆಲಿವರಿ ಬಾಯ್ ಕಾಮರಾಜ್ ದೂರು, ಎಫ್ಐಆರ್ ದಾಖಲು