ವಿವಾದ ಮರೆತು ‘ಮುತ್ತರಸ’ ಸಿನಿಮಾ ಕೆಲಸ ಶುರು ಮಾಡಿದ ಮಡೆನೂರು ಮನು

ನಟ ಮಡೆನೂರು ಮನು ಅವರು ಇತ್ತೇಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಸುದ್ದಿಗೋಷ್ಠಿ ನಡೆಯಿತು. ವಿವಾದಗಳಿಂದ ಹೊರಬಂದಿರುವ ಮನು ಅವರು ಹೊಸ ಸಿನಿಮಾದ ಕೆಲಸ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಮುತ್ತರಸ ಎಂದು ಶೀರ್ಷಿಕೆ ಇಡಲಾಗಿದೆ. ನಟರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಹಲವು ಗಣ್ಯರು ಶೀರ್ಷಿಕೆ ಅನಾವರಣ ಮಾಡಿದರು.

ವಿವಾದ ಮರೆತು ‘ಮುತ್ತರಸ’ ಸಿನಿಮಾ ಕೆಲಸ ಶುರು ಮಾಡಿದ ಮಡೆನೂರು ಮನು
Madenur Manu

Updated on: Sep 12, 2025 | 7:16 PM

ಒಂದಷ್ಟು ತಿಂಗಳ ಹಿಂದೆ ನಟ ಮಡೆನೂರು ಮನು (Madenur Manu) ಅವರು ಬರೀ ವಿವಾದದ ಮೂಲಕವೇ ಹೆಚ್ಚು ಸುದ್ದಿ ಆಗಿದ್ದರು. ಅದು ಅವರ ಬದುಕಿನ ಕಹಿ ಅಧ್ಯಾಯ ಆಗಿತ್ತು. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಬಿಡುಗಡೆ ವೇಳೆಯೇ ಅವರ ಹೆಸರು ವಿವಾದದಲ್ಲಿ ಸಿಲುಕಿಕೊಂಡಿತ್ತು. ಈಗ ಅವರು ಅದರಿಂದ ಹೊರಬಂದು ಸಿನಿಮಾ ಕೆಲಸಗಳತ್ತ ಮುಖಮಾಡಿದ್ದಾರೆ. ಇತ್ತೀಚೆಗೆ ಮಡೆನೂರು ಮನು ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಈ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆ ಚಿತ್ರಕ್ಕೆ ‘ಮುತ್ತರಸ’ (Muttarasa) ಎಂದು ಶೀರ್ಷಿಕೆ ಇಡಲಾಗಿದೆ.

‘ಜೆ.ಕೆ. ಮೂವೀಸ್’ ಮೂಲಕ ಕೆ.ಎಂ. ನಟರಾಜ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಸಿಷ್ಠ ಸಿಂಹ, ಎಂ.ಎಸ್. ಉಮೇಶ್, ಕರಿಸುಬ್ಬು, ಉಮೇಶ್ ಬಣಕಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರು ಟೈಟಲ್ ಅನಾವರಣ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಡೆನೂರು ಮನು ಅವರು ಮಾತನಾಡಿದರು. ‘ಕೆಲವು ದಿನಗಳ ಹಿಂದೆ ನನ್ಮ ಜೀವನದಲ್ಲಿ ಆದ ಕಹಿ ಘಟನೆಗಳನೆಲ್ಲ ಮರೆತಿದ್ದೇನೆ. ಈಗ ಯಾವುದೇ ಸಮಸ್ಯೆ ಇಲ್ಲ. ಆ ಸಂದರ್ಭದಲ್ಲಿ ನನ್ನ ಜೊತೆಗೆ ನಿಂತ ಎಲ್ಲರಿಗೂ ನಾನು ಚಿರಋಣಿ . ಇಂದು ನನ್ನ ಹೊಸ ಸಿನಿಮಾದ ಟೈಟಲ್ ಬಿಡುಗಡೆ ಆಗಿದೆ. ವಸಿಷ್ಠ ಸಿಂಹ ಹಾಗೂ ಎಲ್ಲ ಗಣ್ಯರಿಗೆ ಧನ್ಯವಾದಗಳು’ ಎಂದು ಅವರು ಹೇಳಿದರು.

‘ನಾನು ವಸಿಷ್ಠ ಸಿಂಹ ಅವರ ಜೊತೆ ತಲ್ವಾರ್ ಪೇಟೆ ಸಿನಿಮಾದಲ್ಲಿ ನಟಿಸಿದ್ದೆ. ‘ಮುತ್ತರಸ’ ಎಂಬ ಶೀರ್ಷಿಕೆ ಕೊಟ್ಟಿರುವುದು ನಿರ್ದೇಶಕ ರಾಮ್ ನಾರಾಯಣ್. ಮುಂದಿನ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್ ಪ್ರಾರಂಭ ಆಗಲಿದೆ. ಈ ಚಿತ್ರದ ನಿರ್ದೇಶಕರು ಯಾರು? ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ’ ಎಂದಿದ್ದಾರೆ ಮಡೆನೂರು ಮನು.

ಇದನ್ನೂ ಓದಿ: ‘ಜೈಲು ನರಕಯಾತನೆ, ಡಿಪ್ರೆಶನ್​ ಕಾಡುತ್ತೆ’; ದರ್ಶನ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಡೆನೂರು ಮನು

‘ಎನ್.ಆರ್. ರಮೇಶ್, ಶಿವಕುಮಾರ್ ನಾಯಕ್, ಯೋಗರಾಜ್ ಭಟ್, ಸಂತೋಷ್ ಕುಮಾರ್, ವಿದ್ಯಾ, ರಾಮ್ ನಾರಾಯಣ್ ಅವರನ್ನು ನೆನೆಯುತ್ತೇನೆ. ಈ ವರ್ಷದ ಕೊನೆಗೆ ನಾನು ನಟಿಸಿರುವ ‘ವಿಚಾರಣೆ’ ಸಿನಿಮಾ ಕೂಡ ಬಿಡುಗಡೆ ಆಗಲಿದೆ’ ಎಂದು ಮಡೆನೂರು ಮನು ಹೇಳಿದ್ದಾರೆ. ‘ನನ್ನ ಹಿಂದಿನ ನಿರ್ಮಾಣದ ಸಿನಿಮಾದಲ್ಲೂ ಮನು ನಟಿಸಿದ್ದರು. ಈಗ ನನ್ನ ಮತ್ತು ಅವರ ಕಾಂಬಿನೇಷನ್​​ನಲ್ಲಿ 2ನೇ ಸಿನಿಮಾ ಮೂಡಿಬರುತ್ತಿದೆ. ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ’ ಎಂದು ‘ಮುತ್ತರಸ’ ಚಿತ್ರದ ನಿರ್ಮಾಪಕ ನಟರಾಜ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.