ಭೀಕರ ಅಪಘಾತದಲ್ಲಿ ಸುನೀಲ್​ ನಿಧನರಾದಾಗ ನಿಜವಾಗಿ ನಡೆದಿದ್ದು ಏನು? ಸಂಬಂಧಿ ಸಚಿನ್​ ತೆರೆದಿಟ್ಟ ಸತ್ಯ

|

Updated on: Jun 11, 2021 | 4:26 PM

ಸುನೀಲ್​ ಸಿನಿಮಾಗಳ ಶೂಟಿಂಗ್​ಗೆ ತೆರಳುತ್ತಿದ್ದಾಗ ಹೆಚ್ಚಿನ ಸಂದರ್ಭದಲ್ಲಿ ಅವರ ಜೊತೆ ಸಚಿನ್​ ಇರುತ್ತಿದ್ದರು. ಸುನಿಲ್​ ಅಪಘಾತವಾಗಿ ನಿಧನರಾದ ದಿನ ಕೂಡ ಅವರ ಜೊತೆ ಸಚಿನ್ ಇದ್ದರು.

ಭೀಕರ ಅಪಘಾತದಲ್ಲಿ ಸುನೀಲ್​ ನಿಧನರಾದಾಗ ನಿಜವಾಗಿ ನಡೆದಿದ್ದು ಏನು? ಸಂಬಂಧಿ ಸಚಿನ್​ ತೆರೆದಿಟ್ಟ ಸತ್ಯ
ರಸ್ತೆ ಅಪಘಾತದಲ್ಲಿ ನಿಧನರಾದ ನಟ ಸುನೀಲ್​
Follow us on

ಕನ್ನಡ ಚಿತ್ರರಂಗದಲ್ಲಿ ಆಗತಾನೇ ಮಿಂಚಲು ಆರಂಭಿಸಿದ್ದ ಸ್ಫುರದ್ರೂಪಿ ನಟ ಸುನೀಲ್​ ಅವರು 1994ರಲ್ಲಿ ನಿಧನರಾಗಿದ್ದು ಅವರ ಅಭಿಮಾನಿಗಳನ್ನು ನೋವಿನ ಕಂದಕಕ್ಕೆ ದೂಡಿತ್ತು. ಭೀಕರ ರಸ್ತೆ ಅಪಘಾತದಲ್ಲಿ 1994ರ ಜು.24ರಂದು ಸುನೀಲ್​ ಮೃತಪಟ್ಟರು. ನಿಜಕ್ಕೂ ಅಂದು ಏನು ನಡೆಯಿತು ಎಂಬುದನ್ನು ಅವರ ಮಾವನ ಮಗ ಸಚಿನ್​ ಈಗ ವಿವರಿಸಿದ್ದಾರೆ. ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಘುರಾಮ್​ ಅವರು ಇತ್ತೀಚೆಗೆ ಮಾಡಿರುವ ಒಂದು ಸಂದರ್ಶನದಲ್ಲಿ ಆ ಬಗ್ಗೆ ಸಚಿನ್​ ಮಾತನಾಡಿದ್ದಾರೆ.

ಸುನೀಲ್​ ಸಿನಿಮಾಗಳ ಶೂಟಿಂಗ್​ಗೆ ತೆರಳುತ್ತಿದ್ದಾಗ ಹೆಚ್ಚಿನ ಸಂದರ್ಭದಲ್ಲಿ ಅವರ ಜೊತೆ ಸಚಿನ್​ ಇರುತ್ತಿದ್ದರು. ಸುನಿಲ್​ ಅಪಘಾತವಾಗಿ ನಿಧನರಾದ ದಿನ ಕೂಡ ಅವರ ಜೊತೆ ಸಚಿನ್ ಇದ್ದರು. ‘ನಿರಂತರವಾಗಿ ಜರ್ನಿ ಮಾಡುತ್ತ ಇದ್ದೆವು. ಆಗ ಎರಡು ಕಾರ್ಯಕ್ರಮದ ಸಲುವಾಗಿ ಸುನೀಲ್​ ಅವರು ಹೈದರಾಬಾದ್​ನಿಂದ ಕರ್ನಾಟಕಕ್ಕೆ ಬರುತ್ತಿದ್ದರು. ನಮ್ಮ ಡ್ರೈವರ್​ ಬೆಂಗಳೂರಿನಿಂದ ಹೈದರಾಬಾದ್​ಗೆ ಬಂದು ಸುನೀಲ್​ರನ್ನು ಕರೆದುಕೊಂಡು ಬಂದರು’ ಎಂದು ಆ ದಿನದ ಬಗ್ಗೆ ಸಚಿನ್​ ಮಾತು ಆರಂಭಿಸುತ್ತಾರೆ.

‘ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಹೋದೆವು. ಡ್ರೈವರ್​ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ ಎನಿಸುತ್ತದೆ. ಅದೇ ಸಮಸ್ಯೆ ಆಯ್ತು. ಕಾಂಟೆಸಾ ಕಾರಿನಲ್ಲಿ ಚಲಿಸುತ್ತಿದ್ದಾಗ, ನಿನಗೆ ಏನಾದರೂ ನಿದ್ರೆ ಬಂದರೆ ಹೇಳು ಎಂದು ಚಾಲಕನಿಗೆ ಸುನೀಲ್​ ಕೇಳಿದರು. ಅಷ್ಟೇ ನನಗೆ ನೆನಪಿರುವುದು. ಆಮೇಲೆ ಎಚ್ಚರ ಆದಾಗ ಆಸ್ಪತ್ರೆಯಲ್ಲಿ ಇದ್ದೆ’ ಎಂದು ಆ ಭೀಕರ ದಿನವನ್ನು ಸಚಿನ್​ ನೆಪಿಸಿಕೊಂಡಿದ್ದಾರೆ.

‘ಆ ದಿನ ನಾವು ಹೊರಡಬೇಕು ಎಂದುಕೊಂಡಿರಲಿಲ್ಲ. ಒಂದು ದಿನ ಉಳಿದುಕೊಳ್ಳೋಣ ಎನಿಸುತ್ತಿತ್ತು. ಆದರೆ ಡ್ರೈವರ್​ ಮಗಳ ಬರ್ತ್​ಡೇ ಇದೆ ಎಂಬ ಕಾರಣಕ್ಕೆ ನಾವು ಅದೇ ದಿನ ರಾತ್ರಿ ಹೊರೆಟೆವು. ಅಪಘಾತ ಆದ ಬಳಿಕ ನಮ್ಮನ್ನು ಬೆಂಗಳೂರಿಗೆ ಶಿಫ್ಟ್​ ಮಾಡುವಾಗ ಸುನೀಲ್​ ನಿಧನರಾದರು. ನನಗೆ ಎಷ್ಟೋ ದಿನಗಳ ಬಳಿಕ ಪ್ರಜ್ಞೆ ಬಂತು’ ಎಂದಿದ್ದಾರೆ ಸಚಿನ್​.

ಸುನೀಲ್​ ಅವರ ಬಾಲ್ಯದ ಕೆಲವು ವಿವರಗಳನ್ನೂ ಸಚಿನ್​ ಹಂಚಿಕೊಂಡಿದ್ದಾರೆ. ‘ಹುಟ್ಟಿದಾಗ ಅವರಿಗೆ ಸುನಿಲ್​ ಅಂತ ಹೆಸರು ಇಟ್ಟಿದ್ದರು. ನಂತರ ಮೂರು ವರ್ಷದವನಾಗಿದ್ದಾಗ ರಾಮಕೃಷ್ಣ ಅಂತ ಹೆಸರಿಟ್ಟರು. ಅದು ನಮ್ಮ ತಾತನ ಹೆಸರು. ಶಾಲೆಯಲ್ಲೂ ಅದೇ ಹೆಸರು ಇತ್ತು. ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಸುನೀಲ್​ ಅಂತ ಬದಲಾಯಿಸಿಕೊಂಡರು’ ಎಂದು ಸಚಿನ್​ ಹೇಳಿದ್ದಾರೆ.

‘ವಯಸ್ಸಿನಲ್ಲಿ ನನಗೂ ಮತ್ತು ಸುನೀಲ್​ಗೆ 9 ವರ್ಷ ವ್ಯತ್ಯಾಸ. ಆದರೂ ನಮ್ಮಿಬ್ಬರ ನಡುವೆ ಒಳ್ಳೆಯ ಒಡನಾಟ ಇತ್ತು. ಮಂಗಳೂರಿನ ಬ್ರಹ್ಮಾವರದ ಬಳಿ ಇರುವ ಯಡ್ತಾಡಿ ಎಂಬಲ್ಲಿ ಸುನೀಲ್​ ಹುಟ್ಟಿ ಬೆಳೆದಿದ್ದು. ಪಿಯುಸಿವರೆಗೆ ಅಲ್ಲಿಯೇ ಓದಿದ್ದು. ಇಂಜಿನಿಯರಿಂಗ್​ ಮಾಡಲು ಬೆಂಗಳೂರಿಗೆ ಬಂದರು. ಆರ್​ವಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಸಿವಿಲ್​ ಬ್ರ್ಯಾಂಚ್​ ಸೇರಿಕೊಂಡರು’ ಎಂದು ಸಚಿನ್​ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ಸುನೀಲ್​ಗೆ ಮೂರು ಜನ ಒಡಹುಟ್ಟಿದವರು. ತಂದೆ-ತಾಯಿಗೆ ಸುನೀಲ್​ ನಾಲ್ಕನೇ ಮಗು. ಈಗ ದೊಡ್ಡಕ್ಕ ಬಾರ್ಕೂರಿನಲ್ಲಿ ಇದ್ದಾರೆ. ಎರಡನೇ ಅಕ್ಕ ಬೆಂಗಳೂರಿನಲ್ಲಿ ಇದ್ದಾರೆ. ಒಬ್ಬ ಅಣ್ಣ ಕೂಡ ಬೆಂಗಳೂರಿನಲ್ಲಿಯೇ ಇದ್ದಾರೆ’ ಎಂದು ಮಾಹಿತಿ ನೀಡಿರುವ ಸಚಿನ್​ ಅಮೆರಿಕದಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ:

ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್​ ಹೀಗೆ ಹೇಳಿದ್ದೇಕೆ?

Koti Ramu: ಕೋಟಿ ರಾಮು ನಿಧನದ ಬಳಿಕ ಮೊದಲ ಬಾರಿ ಮೌನ ಮುರಿದ ಪತ್ನಿ ಮಾಲಾಶ್ರೀ

Published On - 4:22 pm, Fri, 11 June 21