ಶಿಕ್ಷಣ ವ್ಯವಸ್ಥೆಯ (Education System) ಹುಳುಕಳ ಬಗ್ಗೆ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಸಹ ಶಿಕ್ಷಣ ವ್ಯವಸ್ಥೆಯ ಲೋಪಗಳ ಬಗೆಗಿನ ವಿಷಯವನ್ನೇ ಆಧರಿಸಿತ್ತು. ವಾರಕ್ಕೊಂದು ಸಿನಿಮಾ ಮಾಡುವಷ್ಟು ಸರಕು ಶಿಕ್ಷಣ ವ್ಯವಸ್ಥೆಯಲ್ಲಿದೆ. ಇದೀಗ ಹೊಸಬರ ತಂಡವೊಂದು ಇದೇ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದು, ಸಿನಿಮಾಕ್ಕೆ ಕ್ಯಾಚಿ ಹೆಸರಿಟ್ಟಿದೆ. ಅದುವೇ ‘ಬನ್-ಟೀ’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.
ಶಿಕ್ಷಣದಂಥಹಾ ಗಂಭೀರ ವಿಷಯವನ್ನು ಆಧರಿಸಿದ ‘ಬನ್ ಟೀ’ ಸಿನಿಮಾವನ್ನು ಉದಯ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ತಮ್ಮ ಸ್ನೇಹಿತನೊಬ್ಬನ ಜೀವನದಲ್ಲಿ ನಡೆದಿರುವ ಕತೆಯನ್ನೇ ಉದಯ್ ಕುಮಾರ್ ಸಿನಿಮಾ ಆಗಿ ತೆರೆ ಮೇಲೆ ತರಲು ಮುಂದಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಎಂದು ಯಾರೂ ಇಲ್ಲ. ಬದಲಿಗೆ ಎಲ್ಲರೂ ಪಾತ್ರಗಳಷ್ಟೆ. ಕೇವಲ ಕತೆ ಹಾಗೂ ಅದು ಹೊಮ್ಮಿಸುವ ಸಂದೇಶದ ಮೇಲೆ ಈ ಸಿನಿಮಾ ಆಧಾರವಾಗಿದೆ. ‘ಬನ್ ಟೀ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಉಮೇಶ್ ಮತ್ತು ಶ್ರೀದೇವಿ, ಗುಂಡಣ್ಣ ಚಿಕ್ಕಮಗಳೂರು ಸೇರಿದಂತೆ ಅನೇಕರು ನಟಿಸಿದ್ದಾರೆ. ನಟ ಉಮೇಶ್ ವೃತ್ತಿಯಲ್ಲಿ ವಕೀಲ. ಆದರೆ ಈ ಸಿನಿಮಾದ ವಸ್ತು ಹಿಡಿಸಿದ ಕಾರಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀದೇವಿ ಅವರಿಗೂ ಇದು ಮೊದಲ ಸಿನಿಮಾ.
ಇದನ್ನೂ ಓದಿ:‘ಸಲಾರ್’ ಸಿನಿಮಾ ಟ್ರೈಲರ್ ಯಾವಾಗ? ಪ್ರೊಮೋಷನ್ ಶುರು ಎಂದಿನಿಂದ?
ಬನ್ ಟೀ ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಹೆಸರಿನ ಇಬ್ಬರು ಬಾಲ ಕಲಾವಿದರು ನಟಿಸಿದ್ದು, ಅವರ ಪಾತ್ರವೂ ಸಿನಿಮಾದಲ್ಲಿ ಬಹಳ ಪ್ರಮುಖವಾದುದು. ಯಾವುದೇ ಸೆಟ್ ಬಳಸದೆ ಸಂಪೂರ್ಣವಾಗಿ ಹೊರಾಂಗಣದಲ್ಲಿಯೇ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕ ಉದಯ್ ಕುಮಾರ್. ಸ್ಲಮ್, ಮಾರ್ಕೆಟ್ ಸೇರಿದಂತೆ ಅನೇಕ ಕಡೆ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಹದಗೆಟ್ಟಿರುವ ಶಿಕ್ಷಣದ ವ್ಯವಸ್ಥೆ, ಸಂಪೂರ್ಣವಾಗಿ ವ್ಯಾಪಾರಿಕರಣವಾಗಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬನ್ ಟೀ ಸಿನಿಮಾ ಚರ್ಚೆ ನಡೆಸುತ್ತದೆ.
ಬನ್ ಟೀ ಸಿನಿಮಾಕ್ಕೆ ಕೇಶವ್ ಆರ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ಹಾಡುಗಳಿಲ್ಲ. ಆದರೆ ಸಿನಿಮಾಕ್ಕೆ ಹಿನ್ನೆಲೆ ಸಂಗೀತವನ್ನು ಪ್ರದ್ಯೋತ್ತನ್ ನೀಡಿದ್ದಾರೆ. ರಾಜ ರಾವ್ ಅವರು ಸಿನಿಮಾಟೊಗ್ರಫಿ ಒದಗಿಸಿದ್ದಾರೆ. ಸಿನಿಮಾದ ಟ್ರೈಲರ್ ಪ್ರಸ್ತುತ ಬಿಡುಗಡೆ ಆಗಿದ್ದು, ‘ಬನ್ ಟೀ’ ಸಿನಿಮಾ ಇದೇ ತಿಂಗಳು 22ಕ್ಕೆ ತೆರೆಗೆ ಬರಲಿದೆ.