ಶಂಕರ್ ನಾಗ್ ಅವರು ಕನ್ನಡ ನಾಡು ಕಂಡ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. ಅತಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಆಗಿನ ಕಾಲದಲ್ಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ನೀಡಿದ ಖ್ಯಾತಿ ಶಂಕರ್ನಾಗ್ಗೆ ಸಲ್ಲುತ್ತದೆ. ಅಷ್ಟೇ ಅಲ್ಲ, ಕರ್ನಾಟಕದ ಬಗ್ಗೆ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆದರೆ, ಅದೆಲ್ಲವೂ ಕಾರ್ಯರೂಪಕ್ಕೆ ಬರುವುದಕ್ಕೂ ಮೊದಲೇ ಮೃತಪಟ್ಟಿದ್ದರು. ಈ ಸಾವು ನ್ಯಾಯವಲ್ಲ ಎಂಬುದು ಈಗಲೂ ಅನೇಕರ ಅಭಿಪ್ರಾಯ. ಹಾಗಾದರೆ, ಶಂಕರ್ ನಾಗ್ ಅವರು ಕನ್ನಡ ನಾಡ ಬಗ್ಗೆ ಕಂಡ ಕನಸುಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹಾಲಿವುಡ್ ಮಾದರಿಯ ಸ್ಟುಡಿಯೋ
ಹಾಲಿವುಡ್ನಲ್ಲಿ ಇರುವ ಸ್ಟುಡಿಯೋಗಳಲ್ಲಿ ಒಂದೇ ಕಡೆಗಳಲ್ಲಿ ಎಲ್ಲವೂ ಸಿಗುತ್ತದೆ. ಇದೇ ಮಾದರಿಯ ಕನಸನ್ನು ಶಂಕರ್ ನಾಗ್ ಕೂಡ ಕಂಡಿದ್ದರು. ಶೂಟಿಂಗ್, ವಿಎಫ್ಎಕ್ಸ್ ಸೇರಿ ಎಲ್ಲವೂ ಒಂದೇ ಕಡೆಯಲ್ಲಿ ಸಿಗಬೇಕು. ಆ ರೀತಿಯ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂಬುದು ಶಂಕರ್ ನಾಗ್ ಅವರ ಕನಸಾಗಿತ್ತು. 1985ರ ಸಂದರ್ಭದಲ್ಲಿ ಡಬ್ಬಿಂಗ್ ಸೇರಿ ಎಲ್ಲಾ ಸಿನಿಮಾ ಕೆಲಸಗಳು ಚೆನ್ನೈನಲ್ಲಿ ನಡೆಯುತ್ತಿತ್ತು. ಹೀಗಾಗಿ, ಕನ್ನಡದ ಹೀರೋಗಳು ಅಲ್ಲಿಯೇ ವಾಸವಾಗಿದ್ದರು. ಅವೆಲ್ಲವೂ ಕರ್ನಾಟಕಕ್ಕೆ ಶಿಫ್ಟ್ ಆಗಬೇಕು ಎನ್ನುವುದು ಅವರ ಕನಸಾಗಿತ್ತು. ಅಂತೆಯೇ, ಶಂಕರ್ನಾಗ್ ಕಷ್ಟಪಟ್ಟು ಬೆಂಗಳೂರಿನಲ್ಲಿ ಒಂದು ಸ್ಟುಡಿಯೋ ಆರಂಭಿಸಿದ್ದರು.
ಪ್ರಯೋಗಾತ್ಮಕ ಸಿನಿಮಾಗಳು
ಸ್ಯಾಂಡಲ್ವುಡ್ಗೆ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ನೀಡಿದ ಖ್ಯಾತಿ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಇದರ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ದೃಶ್ಯಗಳನ್ನು ಕೂಡ ಅವರು ತಮ್ಮ ಸಿನಿಮಾಗಳಲ್ಲಿ ಸೇರಿಸಿದ್ದರು. ‘ಒಂದು ಮುತ್ತಿನ ಕಥೆ’ ಸಿನಿಮಾದಲ್ಲಿ ಬರುವ ಅಂಡರ್ವಾಟರ್ ದೃಶ್ಯ ಇದಕ್ಕೆ ಉತ್ತಮ ಉದಾಹರಣೆ. ಇನ್ನು, ಹಾಲಿವುಡ್ ಸಿನಿಮಾಗಳಿಂದ ಆಗಲೇ ಅವರು ಪ್ರೇರಿತರಾಗಿದ್ದರು.
ಸ್ಪೆಷಲ್ ಎಫೆಕ್ಟ್ ಸೆಂಟರ್
1991 ಅಲ್ಲಿ ‘ಘೋಸ್ಟ್’ ಹೆಸರಿನ ಇಂಗ್ಲಿಷ್ ಸಿನಿಮಾ ತೆರೆಗೆ ಬಂದಿತ್ತು. ಇದರಲ್ಲಿ ಸಾಕಷ್ಟು ಸ್ಪೆಷಲ್ ಎಫೆಕ್ಟ್ ಬಳಕೆ ಮಾಡಿಕೊಳ್ಳಲಾಗಿತ್ತು. ಇದನ್ನು ‘ನಾಗಮಂಡಲ’ ಸಿನಿಮಾಗೆ ತರಬೇಕು ಎನ್ನುವುದು ಶಂಕರ್ನಾಗ್ ಕನಸಾಗಿತ್ತು. ಇದಕ್ಕಾಗಿ ಅವರು ಲಂಡನ್, ಯುರೋಪ್ಗೆ ಹೋಗಿ ಆ ಕಂಪನಿಗಳ ಜತೆ ಮಾತನಾಡಿದ್ದರು. ಆ ರೀತಿಯ ಸ್ಪೆಷಲ್ ಎಫೆಕ್ಟ್ ಸೆಂಟರ್ಗಳನ್ನು ಭಾರತಕ್ಕೆ ತರಬೇಕು ಎಂದು ಶಂಕರ್ ನಾಗ್ ಕನಸು ಕಂಡಿದ್ದರು.
ಮೆಟ್ರೋ ಕನಸು
ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹಲವು ವರ್ಷ ಕಳೆದಿದೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ವೇಗವಾಗಿ ತಲುಪಬಹುದು. ಅಷ್ಟೇ ಅಲ್ಲ, ಟ್ರಾಫಿಕ್ ಕೂಡ ಕಡಿಮೆ ಆಗುತ್ತದೆ. ಬೆಂಗಳೂರಿಗೆ ಮೆಟ್ರೋ ಬರಬೇಕು ಎಂದು ಶಂಕರ್ ನಾಗ್ ಆಗಲೇ ಕನಸು ಕಂಡಿದ್ದರು.
ನಂದಿ ಬೆಟ್ಟದಲ್ಲಿ ರೋಪ್ ವೇ
ನಂದಿ ಬೆಟ್ಟ ಜನಪ್ರಿಯ ಪ್ರವಾಸಿ ತಾಣ. ಪ್ರತಿ ವಾರ ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಇಲ್ಲಿ ರೋಪ್ವೇ ಮಾಡಬೇಕು ಎಂದು ಶಂಕರ್ನಾಗ್ ಕನಸು ಕಂಡಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ. ಆದರೆ, ಶಂಕರ್ ನಾಗ್ ಈ ಬಗ್ಗೆ ಆಗಲೇ ಕನಸು ಕಂಡಿದ್ದರು.
ಇದನ್ನೂ ಓದಿ: ‘ಆ ಕಾಲದಲ್ಲೇ ಶಂಕರ್ ನಾಗ್ ಲ್ಯಾಪ್ಟಾಪ್ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್
ಶಂಕರ್ ನಾಗ್ಗೆ ಆ್ಯಕ್ಸಿಡೆಂಟ್ ಆಗುವ ಹಿಂದಿನ ದಿನವೇ ಅವರು ಸಾಯುವ ಸೀನ್ ಶೂಟ್ ಮಾಡಿದ್ವಿ; ದೊಡ್ಡಣ್ಣ