ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ‘ಪದ್ಮಗಂಧಿ’ ಟ್ರೇಲರ್: ಕಮಲದ ಹೂವಿನ ಕುರಿತ ಸಿನಿಮಾ

ಶೀಘ್ರದಲ್ಲೇ ‘ಪದ್ಮಗಂಧಿ’ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ಕ. ಸುಚೇಂದ್ರ ಪ್ರಸಾದ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಎಸ್.ಆರ್. ಲೀಲಾ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಮಲದ ಹೂವಿನ ಕುರಿತು ಕಥೆ ಇರಲಿದೆ. ಚಿತ್ರದಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಟ್ರೇಲರ್​​ನಲ್ಲಿ ಸುಳಿವು ನೀಡಲಾಗಿದೆ.

ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ‘ಪದ್ಮಗಂಧಿ’ ಟ್ರೇಲರ್: ಕಮಲದ ಹೂವಿನ ಕುರಿತ ಸಿನಿಮಾ
Padmagandhi Movie Team

Updated on: Dec 08, 2025 | 6:43 PM

ಸುಚೇಂದ್ರ ಪ್ರಸಾದ (Suchendra Prasad) ಅವರಿಗೆ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ನಟನೆ ಮಾತ್ರವಲ್ಲದೇ ತೆರೆಹಿಂದಿನ ಕೆಲಸಗಳನ್ನು ಕೂಡ ಅವರು ಚೆನ್ನಾಗಿ ಬಲ್ಲರು. ಈಗ ಅವರು ‘ಪದ್ಮಗಂಧಿ’ (Padmagandhi) ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾ ಕನ್ನಡದ ಜೊತೆಗೆ ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ಕೂಡ ಮೂಡಿಬರುತ್ತಿದೆ. ಇತ್ತೀಚೆಗೆ ಮೂರು ಭಾಷೆಯಲ್ಲಿ ಟ್ರೇಲರ್ ಮತ್ತು ಗೀತೆಗಳನ್ನು ಬಿಡುಗಡೆ ಮಾಡಲಾಯಿತು. ಕಮಲದ ಹೂವಿನ ಬಗ್ಗೆ ಇಡೀ ‘ಪದ್ಮಗಂಧಿ’ ಸಿನಿಮಾ ಇರಲಿದೆ ಎಂಬುದು ವಿಶೇಷ.

ಮಾಜಿ ಎಂಎಲ್‌ಸಿ, ಅಂಕಣಗಾರ್ತಿ, ಸಂಸ್ಕೃತ ಭಾಷೆಯ ಬಗ್ಗೆ ಅಧ್ಯಯನ ನಡೆಸಿರುವ ನಿವೃತ ಪ್ರೊಫೆಸರ್ ಎಸ್.ಆರ್. ಲೀಲಾ ಅವರ ಪರಿಕಲ್ಪನೆಯಲ್ಲಿ ‘ಪದ್ಮಗಂಧಿ’ ಸಿನಿಮಾ ಮೂಡಿಬರುತ್ತಿದೆ. ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ. ‘ಸುಚಿತ್ ಫಿಲ್ಮ್ಸ್​’ ಮೂಲಕ ವೆಂಕಟ್‌ ಗೌಡ ಅವರು ಬಿಡುಗಡೆ ಮಾಡಲಿದ್ದಾರೆ.

‘ಪದ್ಮಗಂಧಿ’ ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಕುಮಾರಿ ಮಹಾಪದ್ಮ ಅವರು ಈ ಸಿನಿಮಾದಲ್ಲಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಅವರು ಅಭಿನಯಿಸಿದ್ದಾರೆ. ಡಾ. ದೀಪಕ್ ಪರಮಶಿವನ್ ಅವರು ಸಂಗೀತ ನೀಡಿದ್ದಾರೆ. ಮನು ಯಾಪ್ಲಾರ್, ನಾಗರಾಜ್ ಅದ್ವಾನಿ, ಗಿರಿಧರ್ ‌ದಿವಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎನ್. ನಾಗೇಶ್ ನಾರಾಯಣಪ್ಪ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

‘ಪದ್ಮಗಂಧಿ’ ಸಿನಿಮಾದ ಟ್ರೇಲರ್:

ಶತಾವಧಾನಿ ಡಾ. ಆರ್. ಗಣೇಶ್, ಮುಕ್ತಿನಾಗ ದೇವಸ್ಥಾನದ ಧರ್ಮಾಧಿಕಾರಿ ಡಾ. ಗೌರಿ ಸುಬ್ರಹ್ಮಣ್ಯ , ಡಾ. ಪ್ರೇಮಾ, ಡಾ. ಹೇಮಂತ್‌ ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್. ಭಟ್ (ಶಿಲ್ಪಜ್ಞ), ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್‌ ಪರಮಶಿವನ್, ಹೇಮಂತ ಕುಮಾರ ಜಿ. ಅವರು ಕೂಡ ‘ಪದ್ಮಗಂಧಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚಿಸಿದಾಗ ಮನಸ್ಸು ವಿಚಲಿತವಾಗುತ್ತದೆ’: ಸುಚೇಂದ್ರ ಪ್ರಸಾದ್

ನಿರ್ಮಾಪಕಿ ಎಸ್.ಆರ್. ಲೀಲಾ ಅವರು ಈ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ‘ಈ ಚಿತ್ರವು ಆದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವಿಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇದೆ. ನಮ್ಮಲ್ಲಿ ದೈವಿಕ ಅನುಭೂತಿ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಧಿಯನ್ನು ವಿಸ್ತರಿಸಿಕೊಳ್ಳುತ್ತ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರಯಂತೆ ಭಾಸವಾಗಲಾರಂಭಿಸಿದೆ. ಇದೆಲ್ಲವನ್ನು ಸಂಶೋಧಿಸಿ ವಿಷಯಗಳನ್ನು ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ನನ್ನ ಮನಸ್ಸಿನಲ್ಲಿ ಇರುವಂತೆ ತೆರೆ ಮೇಲೆ ತೋರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.