ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ‘ಪದ್ಮಗಂಧಿ’ ಸಿನಿಮಾ; ಸುಚೇಂದ್ರ ಪ್ರಸಾದ್ ನಿರ್ದೇಶನ
ಎಸ್.ಆರ್. ಲೀಲಾ ನಿರ್ಮಾಣ ಮಾಡಿರುವ ‘ಪದ್ಮಗಂಧಿ’ ಸಿನಿಮಾ 3 ಭಾಷೆಯಲ್ಲಿ ಮೂಡಿಬರುತ್ತಿದೆ. ಹಿರಿಯ ನಟ ಸುಚೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಈ ಚಿತ್ರ ಸಿದ್ಧವಾಗುತ್ತಿರುವುದು ವಿಶೇಷ. ಇತ್ತೀಚೆಗೆ ‘ಪದ್ಮಗಂಧಿ’ ಚಿತ್ರದ ಸುದ್ದಿಗೋಷ್ಠಿ ನಡೆಯಿತು.

ಈ ಕಾಲಘಟ್ಟದಲ್ಲಿ ಒಂದೇ ಸಿನಿಮಾವನ್ನು ವಿವಿಧ ಭಾಷೆಯಲ್ಲಿ ನಿರ್ಮಾಣ ಮಾಡುವ ಟ್ರೆಂಡ್ ಜೋರಾಗಿದೆ. ಎಲ್ಲರೂ ಪ್ಯಾನ್ ಇಂಡಿಯಾ ಕಡೆಗೆ ಗಮನ ಹರಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಸಿನಿಮಾ ಮಾಡುವುದು ರೂಢಿ. ಆದರೆ ವಿಶೇಷ ಎಂಬಂತೆ ‘ಪದ್ಮಗಂಧಿ’ ಸಿನಿಮಾ (Padmagandhi Movie) ಕನ್ನಡದ ಜೊತೆಗೆ ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ವಿಶೇಷವಾದ ಕಥಾಹಂದರ ಇರಲಿದೆ. ಖ್ಯಾತ ನಟ ಸುಚೇಂದ್ರ ಪ್ರಸಾದ್ (Suchendra Prasad) ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
‘ಪದ್ಮಗಂಧಿ’ ಸಿನಿಮಾಗೆ ಕ. ಸುಚೇಂದ್ರ ಪ್ರಸಾದ ಅವರು ನಿರ್ದೇಶನದ ಜೊತೆ ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಯ ಟ್ರೇಲರ್ ಮತ್ತು ಹಾಡುಗಳ ಅನಾವರಣ ಮಾಡಲಾಯಿತು. ನಿವೃತ ಪ್ರೊಫೆಸರ್ ಎಸ್.ಆರ್. ಲೀಲಾ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಂಕರ ಶಾನಭೋಗ್ ಸೇರಿದಂತೆ ಅನೇಕ ಗಾಯಕರು ಗೀತೆಯ ಸಾಲು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಟೆ ರಾಮಚಂದ್ರ ಭಟ್ ಅವರು ಸಂಸ್ಕೃತ ಭಾಷೆಯ ಟ್ರೇಲರ್ ಬಿಡುಗಡೆ ಮಾಡಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಸಮಾರಂಭಕ್ಕೆ ಬಂದು ಮಾತನಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಸುಚೇಂದ್ರ ಪ್ರಸಾದ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆಂದು ಭಾವಿಸಿದ್ದೇನೆ. ಕನ್ನಡ ಚಿತ್ರರಂಗ ಲಾಭದಾಯಕವಲ್ಲದ ಸ್ಥಿತಿಯಲ್ಲಿ ಇರುವಾಗ ಸಿನಿಮಾ ಮಾಡಿದ್ದಾರೆ. ಸಂಸ್ಕೃತ ಎಂಬುದು ದೇಶಾಂತರಕ್ಕೂ ಸಲ್ಲುವ ಭಾಷೆ. ಆದ್ದರಿಂದ ವಿಸ್ಕೃತವಾದಂತಹ ನೋಡುಗರು, ಕೇಳುಗರು ಇರುತ್ತಾರೆ. ಇದರಲ್ಲಿ ಕೈ ಜೋಡಿಸಿದ ಎಲ್ಲರಿಗೂ ಶ್ರೇಯಸ್ಸು ಸಿಗಲಿ’ ಎಂದು ಅವರು ಆಶೀರ್ವಾದ ಮಾಡಿದರು.
ಕುಮಾರಿ ಮಹಾಪದ್ಮ, ಪರಿಪೂರ್ಣ ಚಂದ್ರಶೇಖರ್, ಶತಾವಧಾನಿ ಡಾ. ಆರ್. ಗಣೇಶ್, ಡಾ. ಗೌರಿ ಸುಬ್ರಹ್ಮಣ್ಯ, ಡಾ. ಪ್ರೇಮಾ, ಡಾ. ಹೇಮಂತ್ ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್. ಭಟ್, ಪಂಡಿತ ಪ್ರಸನ್ನ ವೈದ್ಯ, ಹೇಮಂತ ಕುಮಾರ ಜಿ, ಡಾ. ದೀಪಕ್ ಪರಮಶಿವನ್ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ಡಾ. ದೀಪಕ್ ಪರಮಶಿವನ್ ಅವರು ಸಂಗೀತ ನೀಡಿದ್ದಾರೆ.
ಮನು ಯಪ್ಲಾರ್, ನಾಗರಾಜ ಅದ್ವಾನಿ, ಗಿರಿಧರ್ ದಿವಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎನ್. ನಾಗೇಶ್ ನಾರಾಯಣಪ್ಪ ಅವರ ಸಂಕಲನ ಈ ಚಿತ್ರಕ್ಕಿದೆ. ‘ಸಿನಿಮಾವು ಆರಂಭದಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇರುವುದು ವಿಶೇಷ’ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ‘ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚಿಸಿದಾಗ ಮನಸ್ಸು ವಿಚಲಿತವಾಗುತ್ತದೆ’: ಸುಚೇಂದ್ರ ಪ್ರಸಾದ್
‘ನಮ್ಮಲ್ಲಿ ದೈವೀಕ ಅನುಭೂತಿ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಧಿಯನ್ನು ವಿಸ್ತಿರಿಸಿಕೊಳ್ಳುತ್ತಾ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರಯಂತೆ ಭಾಸವಾಗಲಾರಂಭಿಸಿದೆ. ಇದೆಲ್ಲವನ್ನು ಸಂಶೋಧಿಸಿ ವಿಷಯಗಳನ್ನು ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ನನ್ನ ಮನಸ್ಸಿನಲ್ಲಿರುವಂತೆಯೇ ತೆರೆಮೇಲೆ ತೋರಿಸಿದ್ದಾರೆ. ವ್ಯಾಪಕ ಪ್ರಚಾರ ಸಿಕ್ಕರೆ ನಮ್ಮ ಶ್ರಮ ಸಾರ್ಥಕ ಆಗುತ್ತದೆ’ ಎಂದು ನಿರ್ಮಾಪಕಿ ಎಸ್.ಆರ್. ಲೀಲಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




