ವಿಶ್ವವಿಖ್ಯಾತ ಜಿಟಿಎ ಗೇಮ್ನಲ್ಲಿ ಕನ್ನಡ ಹಾಡು, ಸಾಧ್ಯವಾಗಿದ್ದು ಹೇಗೆ?
Grand Theft Auto: ಜಿಟಿಎ ವಿಶ್ವದ ಬಲು ಜನಪ್ರಿಯ ವಿಡಿಯೋ ಗೇಮ್ಗಳಲ್ಲಿ ಒಂದು. ದಶಕಗಳಿಂದಲೂ ಈ ಗೇಮ್ ಅನ್ನು ವಿಶ್ವದಾದ್ಯಂತ ಜನ ಕಂಪ್ಯೂಟರ್, ಮೊಬೈಲ್ಗಳಲ್ಲಿ ಆಡುತ್ತಲೇ ಇದ್ದಾರೆ. ವಿಶ್ವದ ಹಲವಾರು ದೇಶಗಳಲ್ಲಿ ಈ ಗೇಮ್ ಆಡಲಾಗುತ್ತದೆ. ಅಂದಹಾಗೆ ಈ ಗೇಮ್ನಲ್ಲಿ ಕನ್ನಡದ ಹಳೆಯ ಹಾಡೊಂದು ಸಹ ಇದೆ. ಯಾವುದದು?

ಜಿಟಿಎ (GTA), ಗೇಮರ್ಗಳ ಪ್ರಪಂಚದ ಬಲು ಜನಪ್ರಿಯ ಮತ್ತು ಅತಿ ಹೆಚ್ಚು ಜನರಿಂದ ಆಡಲ್ಪಡುವ ಗೇಮ್ ಇದು. ‘ಗ್ರ್ಯಾಂಡ್ ಥೆಫ್ಟ್ ಆಟೋ’ ಅನ್ನು ಸರಳವಾಗಿ ‘ಜಿಟಿಎ’ ಎಂದು ಕರೆಯಲಾಗುತ್ತದೆ. 1997 ರಲ್ಲಿ ನಿರ್ಮಿಸಲಾದ ಈ ಗೇಮ್, ವಿಶ್ವದಲ್ಲಿಯೇ ಅತಿ ಹೆಚ್ಚು ಮಂದಿ ಆಡಿದ ಗೇಮ್ಗಳಲ್ಲಿ ಒಂದಾಗಿದೆ. ಈ ಗೇಮ್ನಲ್ಲಿ ಕಲ್ಪಿತ ನಗರಗಳಿವೆ, ಪಾತ್ರಗಳಿವೆ, ಗೇಮರ್ ಗಾಡಿಗಳನ್ನು ಕಳ್ಳತನ ಮಾಡಿಕೊಂಡು ತನ್ನ ಗುರಿ ಪೂರ್ಣಗೊಳಿಸುವ ಯತ್ನದಲ್ಲಿರುತ್ತಾನೆ. ಈ ಕಲ್ಪಿತ ಗೇಮಿಂಗ್ ಪ್ರಪಂಚದಲ್ಲಿ ಕನ್ನಡ ಹಾಡೊಂದು ಜಾಗ ಪಡೆದುಕೊಂಡಿದೆ!
ಹೌದು, ಜಿಟಿಎನ ಇತ್ತೀಚೆಗಿನ ವರ್ಷನ್ ಒಂದರಲ್ಲಿ ಕನ್ನಡದ ಬಲು ಜನಪ್ರಿಯ ಹಾಡಾಗಿರುವ ವಿನೋದ್ ರಾಜ್ಕುಮಾರ್ ನಟನೆಯ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಸಿನಿಮಾದ ‘ನೀವೆ ನನ್ನ ತಾಯಿ ತಂದೆ’ ಹಾಡು ಸೇರಿಕೊಂಡಿದೆ. ಜಿಟಿಎ ಗೇಮ್ನಲ್ಲಿ ಒಂದು ಕಲ್ಪಿತ ರೇಡಿಯೋ ಸ್ಟೇಷನ್ ಇದೆ. ಆ ಸ್ಟೇಷನ್ ಹೆಸರು ರೇಡಿಯೋ ಡೆಲ್ ಮುಂಡೋ ಎಂದು, ಅಲ್ಲಿನ ಆರ್ಜೆ ಹೆಸರು ಗವಾಸ್ಕರ್, ಆತ ರೇಡಿಯೋ ಡೆಲ್ ಮುಂಡೋ ಹಾಡುಗಳನ್ನು ಪ್ರಸಾರ ಮಾಡುತ್ತಾನೆ. ಜಿಟಿಎ ಗೇಮಿನಲ್ಲಿ ವಾಹನ ಏರಿದರೆ ರೇಡಿಯೋ ಡೆಲ್ ಮುಂಡೋದ ಹಾಡುಗಳು ಪ್ರಸಾರ ಆಗುತ್ತವೆ. ಆಗ ಕನ್ನಡದ ‘ನೀವೆ ನನ್ನ ತಾಯಿ ತಂದೆ’ ಹಾಡು ಸಹ ಪ್ರಸಾರ ಆಗುತ್ತದೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿ, ವಿಜಯ್ ಆನಂದ್ ಸಂಗೀತ ನೀಡಿರುವ ಈ ಹಾಡು ಜಿಟಿಎ ಸೇರಿದ್ದು ಹೇಗೆ?
ಇದನ್ನೂ ಓದಿ:ತಮಿಳು ಸಿನಿಮಾ ಪ್ರಚಾರದಲ್ಲಿ ಕನ್ನಡ ಹಾಡು ಹಾಡಿದ ಚೈತ್ರಾ ಆಚಾರ್, ನಟರು ಫಿದಾ
ಅಂದಹಾಗೆ ಇದೇ ಹಾಡು ಜಿಟಿಎ ಗೇಮ್ ಅನ್ನು ಸೇರಿಕೊಂಡಿದ್ದಕ್ಕೂ ವಿಶೇಷ ಕತೆಯೊಂದಿದೆ. ಹಲವು ವರ್ಷಗಳ ಹಿಂದೆ ಅಮೆರಿಕದ ಯುವ ದಂಪತಿ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು, ಆಗ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಸಿನಿಮಾದ ಕ್ಯಾಸೆಟ್ನ ಕವರ್ ಚಿತ್ರ ಅವರಿಗೆ ಇಷ್ಟವಾಗಿ ಅದನ್ನು ತೆಗೆದುಕೊಂಡು ಹೋಗಿದ್ದರು. ವಿಜಯ್ ಆನಂದ್ ಅವರ ಹಾಡುಗಳು ಸ್ಥಳೀಯ ಪಾಪ್ ಸಂಗೀತದ ಬ್ಯಾಂಡ್ ಒಂದಕ್ಕೆ ಇಷ್ಟವಾಗಿ ಅದೇ ಹಾಡುಗಳನ್ನು ವಿಜಯ್ ಆನಂದ್ ಸೌಥ್ ಇಂಡಿಯನ್ ಮ್ಯೂಸಿಕ್ ಹೆಸರಲ್ಲಿ ಮರು ಬಿಡುಗಡೆ ಮಾಡಿದರು. ಅದು ಸಖತ್ ಜನಪ್ರಿಯವಾಯ್ತು. ಹಾಗೆಯೇ ಅದು ಜಿಟಿಎ ಗೇಮ್ ಡೆವೆಲಪರ್ಗಳ ವರೆಗೆ ತಲುಪಿ, ಅವರು ‘ನೀವೆ ನನ್ನ ತಾಯಿ ತಂದೆ’ ಹಾಡನ್ನು ಗೇಮ್ನಲ್ಲಿ ಬಳಸಿಕೊಂಡರು.
ಅಂದಹಾಗೆ, ಈ ಗೇಮ್ನಲ್ಲಿ ಕನ್ನಡದ ಹಾಡೊಂದು ಮಾತ್ರವೇ ಅಲ್ಲದೆ ಹಿಂದಿಯ ‘ಧಮ್ ಮಾರೊ ಧಮ್’ ಹಾಗೂ ಹಾಗೂ ‘ರಘುಪತಿ ರಾಘವ ರಾಜಾರಾಮ್’ ಹಾಡುಗಳು ಸಹ ಗೇಮಿನಲ್ಲಿ ಪ್ರಸಾರ ಆಗುತ್ತವೆ. ಕನ್ನಡದ ಹಾಡೊಂದು ಜಿಟಿಎ ಸೇರಿರುವುದು ಸಾಮಾನ್ಯ ಸಂಗತಿಯಂತೂ ಅಲ್ಲ, ಕನ್ನಡಿಗರು ಹೆಮ್ಮೆ ಪಡಬಹುದಾದ ವಿಷಯ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Sat, 2 August 25




