Ashok Rao: ಕನ್ನಡದ ಹಿರಿಯ ನಟ ಅಶೋಕ್​​ ರಾವ್​ ನಿಧನ; ಕ್ಯಾನ್ಸರ್​ನಿಂದ ಕೊನೆಯುಸಿರೆಳೆದ ಕಲಾವಿದ

| Updated By: ಮದನ್​ ಕುಮಾರ್​

Updated on: Feb 02, 2022 | 12:46 PM

Ashok Rao Death: ಚಿತ್ರನಟ ಅಶೋಕ್​ ರಾವ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. ರಾತ್ರಿ 12.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.

Ashok Rao: ಕನ್ನಡದ ಹಿರಿಯ ನಟ ಅಶೋಕ್​​ ರಾವ್​ ನಿಧನ; ಕ್ಯಾನ್ಸರ್​ನಿಂದ ಕೊನೆಯುಸಿರೆಳೆದ ಕಲಾವಿದ
ನಟ ಅಶೋಕ್ ರಾವ್
Follow us on

ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಅಶೋಕ್​ ರಾವ್​ (Actor Ashok Rao) ಅವರು ನಿಧನರಾಗಿದ್ದಾರೆ. ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಈಗ ಮೃತಪಟ್ಟಿದ್ದು, ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ತೀವ್ರ ನೋವು ಉಂಟಾಗಿದೆ. ಡಾ. ರಾಜ್​ಕುಮಾರ್​ (Dr. Rajkumar) ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜೊತೆ ಅಶೋಕ್​ ರಾವ್​ ತೆರೆಹಂಚಿಕೊಂಡಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರ ಅನುಭವ ಅಪಾರ. ಅವರಿಗೆ 75 ವರ್ಷ ವಯಸ್ಸಾಗಿತ್ತು. ರಾತ್ರಿ 12.30ಕ್ಕೆ ಅವರು ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ, ಮಗಳು ಹಾಗೂ ಮಗನನ್ನು ಅಶೋಕ್​ ರಾವ್​ ಅಗಲಿದ್ದಾರೆ. ಕೆಲವು ವರ್ಷಗಳಿಂದ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿಯವರೆಗೂ ಚೆನ್ನಾಗಿದ್ದರು. ಆದರೆ ಈಗ ಅವರು ನಿಧನರಾಗಿರುವುದು ನೋವಿನ ಸಂಗತಿ. ಹೃದಯಾಘಾರದಿಂದ ಅಶೋಕ್​ ರಾವ್​ ಮೃತರಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಇಂದು (ಫೆ.2)  ಮಧ್ಯಾಹ್ನ 2.30ರ ಸುಮಾರಿಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಹಲವು ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಅಶೋಕ್​ ರಾವ್​ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿದ್ದರು. ವಿಲನ್​ ಪಾತ್ರಗಳ ಮೂಲಕ ಅವರು ಮಿಂಚಿದ್ದರು. ಡಾ. ರಾಜ್​ಕುಮಾರ್​ ನಟನೆಯ ‘ಪರಶುರಾಮ್​’ ಸಿನಿಮಾದಲ್ಲಿ ಖಳ ನಟನಾಗಿ ಅವರು ಗಮನ ಸೆಳೆದಿದ್ದರು. ಅಶೋಕ್​ ರಾವ್​ ಅವರ ಪ್ರತಿಭೆಯನ್ನು ಗಮನಿಸಿದ್ದ ರಾಜ್​ಕುಮಾರ್​ ಅವರೇ ಕರೆದು ‘ಪರಷುರಾಮ್​’ ಸಿನಿಮಾದ ವಿಲನ್​ ಪಾತ್ರವನ್ನು ಅವರಿಗೆ ನೀಡಿದ್ದರು.

ಅಶೋಕ್ ರಾವ್​ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​​ ಸಿನಿಮಾ ಪ್ರೇಕ್ಷಕರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅಶೋಕ್ ರಾವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್​ ಮೀಡಿಯಾ ಮೂಲಕ ಪ್ರಾರ್ಥಿಸುತ್ತಿದ್ದಾರೆ.

ಅಶೋಕ್ ರಾವ್ ಅವರು ಜನಿಸಿದ್ದು ಕಾಸರಗೋಡಿನಲ್ಲಿ. ತಮಿಳುನಾಡಿನಲ್ಲಿ ಅವರು ವಿದ್ಯಾಭಾಸ ಪಡೆದರು. ಸೇಲಂ ಬಳಿಯ ಒಂದು ವಸತಿ ಶಾಲೆಯಲ್ಲಿ ಅಶೋಕ ರಾವ್​ ಶಿಕ್ಷಣ ಪಡೆದರು. ಆಗಲೇ ಅವರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿತ್ತು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಸಿಕ್ಕವು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್​ ನಾಟಕಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.

ಅಶೋಕ್​ ರಾವ್​ ನಟಿಸಿದ ಮೊದಲ ಸಿನಿಮಾ ‘ಪರಶುರಾಮ್​’. ಮೊದಲ ಚಿತ್ರದಲ್ಲಿಯೇ ಡಾ. ರಾಜ್​ಕುಮಾರ್​ ಎದುರು ಮುಖ್ಯ ವಿಲನ್​ ಆಗಿ ನಟಿಸುವ ಅವಕಾಶ ಅವರನ್ನು ಅರಸಿ ಬಂದಿತ್ತು. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ಅಶೋಕ್​ ರಾವ್​ ಅವರು ಬಳಿಕ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡರು.

ಇದನ್ನೂ ಓದಿ:

‘ದೇವರು ಇದ್ದಾನೋ ಇಲ್ಲವೋ?’: ಸಮನ್ವಿ ನಿಧನದ ಬಳಿಕ ಸೃಜನ್​ ಲೋಕೇಶ್​ ನೋವಿನ ನುಡಿ

Katte Ramachandra: ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಇನ್ನಿಲ್ಲ

Published On - 12:01 pm, Wed, 2 February 22