ನಟ ಕಿರಣ್ ರಾಜ್ ಅವರು ‘ಕನ್ನಡತಿ’ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದರು. ಈಗ ಅವರು ಸೀರಿಯಲ್ ಬದಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ಹೊಸ ಸಿನಿಮಾ ‘ಮೇಘ’ ಬಿಡುಗಡೆಗೆ ಸಿದ್ಧವಾಗಿದೆ. ಚರಣ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಮೇಘ’ ಸಿನಿಮಾದಲ್ಲಿ ನಿಜವಾದ ಸ್ನೇಹ ಮತ್ತು ಪ್ರೀತಿಯ ನಡುವೆ ಇರುವ ಸಣ್ಣ ವ್ಯತ್ಯಾಸವನ್ನು ತಿಳಿಸುವ ಕಥೆ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಿದೆ.
‘ಕೃಷಿ ಪ್ರೊಡಕ್ಷನ್ಸ್’ ಸಂಸ್ಥಾಪಕರಾದ ಯತೀಶ್ ಹೆಚ್.ಆರ್, ಯತೀಶ್ ಆರ್.ಜಿ ಹಾಗೂ ರಮೇಶ್ ಎಚ್.ಎನ್ ಅವರ ಸಹಕಾರದೊಂದಿಗೆ ಪ್ರತಿ ವರ್ಷ ತಲಾ ಒಂದು ಉತ್ತಮವಾದ ಸಿನಿಮಾವನ್ನು ನಿರ್ಮಾಣ ಮಾಡಲು ಸಂಕಲ್ಪ ಹೊಂದಿದ್ದಾರೆ. ‘ಕೃಷಿ ಪ್ರೊಡಕ್ಷನ್ಸ್’ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ‘ಮೇಘ’ ಮೂಡಿಬಂದಿದೆ. ಕಿರಣ್ ರಾಜ್ ಮತ್ತು ಕಾಜಲ್ ಕುಂದರ್ ಜೊತೆ ರಾಜೇಶ್ ನಟರಂಗ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ತಂದೆಯ ಪಾತ್ರವನ್ನು ಅವರಿಗೆ ನೀಡಲಾಗಿದೆ.
‘ಮೇಘ’ ಸಿನಿಮಾದಲ್ಲಿ ಶೋಭರಾಜ್, ಸುಂದರ್ ವೀಣಾ, ಸಂಗೀತಾ, ಹನುಮಂತೇಗೌಡ, ಗಿರೀಶ್ ಶಿವಣ್ಣ, ತರಂಗ ವಿಶ್ವ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭಾವನಾತ್ಮಕವಾಗಿ ಕಥೆ ಇರಲಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಜೋಯಲ್ ಸಕ್ಕರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗೆ ಇದೆ.
ಇದನ್ನೂ ಓದಿ: ಕೋರ್ಟ್ ಕಟಕಟೆಯಲ್ಲಿ ರಾಧಿಕಾ ಪಂಡಿತ್; ಅಬ್ಬರಿಸುತ್ತಾ ವಾದ ಮಾಡಿದ ಯಶ್
ಈ ಸಿನಿಮಾಗಾಗಿ ವಿಜಯ್ ಪ್ರಕಾಶ್ ಹಾಗೂ ವಾಸುಕಿ ವೈಭವ್ ಹಾಡಿರುವ ಗೀತೆಗಳು ಚಿತ್ರದ ಭಾವನಾತ್ಮಕ ಪ್ರಯಾಣವನ್ನು ಇನ್ನಷ್ಟು ಬಲಗೊಳಿಸುತ್ತವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘ನಿನ್ನಲ್ಲಿ ನೀನು’ ಹಾಡಿಗೆ ಯುಟ್ಯೂಬ್ನಲ್ಲಿ ಮೆಚ್ಚುಗೆ ಸಿಗುತ್ತಿದೆ. ಈ ಸಿನಿಮಾಗೆ ಚಂದ್ರಶೇಖರ್ ಅವರ ‘ರವಿ ಫಿಲಂಸ್’ ವಿತರಣಾ ಸಂಸ್ಥೆ ಕೈ ಜೋಡಿಸಿದೆ. ವಿವಿಧ ಸಂಬಂಧಗಳ ಮೌಲ್ಯದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ. ಕಿರಣ್ ರಾಜ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.