ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಶೂಟಿಂಗ್ ಹಂತದಲ್ಲಿ ಇರುವಾಗಲೇ ಸಾಕಷ್ಟು ವಿವಾದ ಮಾಡಿಕೊಂಡಿದೆ. ಇತ್ತೀಚೆಗೆ ಚಿತ್ರತಂಡದ ವಿರುದ್ಧ ಅರಣ್ಯ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಶೂಟಿಂಗ್ ವೇಳೆ ಕಾಡಿನಲ್ಲಿ ಬೆಂಕಿ ಹಚ್ಚಿ ಸಾಕಷ್ಟು ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ತಂಡಕ್ಕೆ ಸಂಪೂರ್ಣ ಕ್ಲೀನ್ ಚಿಟ್ ಸಿಕ್ಕಿದೆ. ಇದರಿಂದ ಸಿನಿಮಾ ತಂಡ ನಿರಾಳ ಆಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದ ಸಮೀಪ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗು ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ಮಾಡಲು ಕಾಂತಾರ ತಂಡ ಅನುಮತಿ ಪಡೆದಿಕೊಂಡಿತ್ತು. ತಂಡದವರು ಅಕ್ರಮವಾಗಿ ಮರಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯಾಧಿಕಾರಿಗಳ ತಂಡ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.
ಇದನ್ನೂ ಓದಿ: ‘ಕಾಂತಾರ 2’ ಚಿತ್ರದ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣದ ವೇಳೆ ಬ್ಲಾಸ್ಟ್ ಮಾಡಲಾಗಿದೆ, ಮರಕಡಿಯಲಾಗಿದೆ, ಇದರಿಂದ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ಸಂಬಂಧ ಕೆಲ ಫೋಟೊಗಳು ಕೂಡ ವೈರಲ್ ಆಗಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ‘ಈ ಬಗ್ಗೆ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ನೀಡಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸ್ಥಳಪರಿಶೀಲನೆ ನಡೆಸಿದ್ದ ಸಕಲೇಶಪುರ ಎಸಿಎಫ್ ಮಧು ಹಾಗು ಯಸಳೂರು ವಿಭಾಗದ ಆರ್ಎಫ್ಓ ಕೃಷ್ಣ ನೇತೃತ್ವದ ತಂಡ ಚಲನಚಿತ್ರದ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದರು. ಆ ಬಳಿಕ ಡಿಸಿಎಫ್ಗೆ ವರದಿ ನೀಡಿದ್ದು, ‘ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 4ರಂದು ಅನುಮತಿ ಪಡೆಯದೆ ಡೀಮ್ಡ್ ಅರಣ್ಯದಲ್ಲಿ ಶೂಟಿಂಗ್ ಪರಿಕರ ತಂದ ಆರೋಪದಲ್ಲಿ 50 ಸಾವಿರ ದಂಡ ವಿಧಿಸಲಾಗಿತ್ತು. ಇದನ್ನು ಬಿಟ್ಟರೆ ಯಾವುದೇ ಬ್ಲಸ್ಟ್ ಮಾಡಿಲ್ಲ, ಮರಗಳನ್ನು ಕಡಿದಿಲ್ಲ, ಮರದಂತೆ ಪೇಂಟ್ ಮಾಡಿದ ವಸ್ತುಗಳನ್ನು ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಕಾಂತಾರ ಸಿನಿಮಾ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.