ರಿಷಬ್ ಶೆಟ್ಟಿಗೆ ಅಮೆರಿಕದಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ; ಒಬಾಮ ಭಾಷಣ ಮಾಡಿದ ಜಾಗದಲ್ಲಿ ಅವಾರ್ಡ್​ ಪಡೆದ ನಟ  

|

Updated on: Jun 28, 2023 | 8:06 AM

Rishab Shetty:ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್​​ನಲ್ಲಿ ರಿಷಬ್ ಶೆಟ್ಟಿಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಅವಾರ್ಡ್​ ನೀಡಿ ಗೌರವಿಸಲಾಗಿದೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ರಿಷಬ್ ಶೆಟ್ಟಿಗೆ ಅಮೆರಿಕದಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ; ಒಬಾಮ ಭಾಷಣ ಮಾಡಿದ ಜಾಗದಲ್ಲಿ ಅವಾರ್ಡ್​ ಪಡೆದ ನಟ  
ಅಮೆರಿಕದಲ್ಲಿ ಪ್ರಶಸ್ತಿ ಗೆದ್ದ ರಿಷಬ್
Follow us on

ನಟ, ನಿರ್ದೇಶಕ, ನಿರ್ಮಾಪಕನಾಗಿ ರಿಷಬ್ ಶೆಟ್ಟಿ (Rishab Shetty) ಅವರು ಗುರುತಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾ ಯಶಸ್ಸಿನ ಬಳಿಕ ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಹಲವು ಪ್ರಶಸ್ತಿಗಳು ಒಲಿದಿವೆ. ವಿಶೇಷ ಎಂದರೆ ಈಗ ರಿಷಬ್​​ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ. ಇದನ್ನು ಸ್ವೀಕರಿಸಲು ಪತ್ನಿ ಪ್ರಗತಿ ಶೆಟ್ಟಿ ಜೊತೆ ಅಮೆರಿಕದ ವಾಷಿಂಗ್ಟನ್​ನ (Washington) ಸಿಯಾಟಲ್​​ಗೆ ಭೇಟಿ ನೀಡಿದ್ದಾರೆ‌. ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್​​ನಲ್ಲಿ ರಿಷಬ್ ಶೆಟ್ಟಿಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಅವಾರ್ಡ್​ ನೀಡಿ ಗೌರವಿಸಲಾಗಿದೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ವಾಷಿಂಗ್ಟನ್​ನ ಸಿಯಾಟಲ್​ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಈಗ ಅದ್ದೂರಿ ಕಾರ್ಯಕ್ರಮದಲ್ಲಿ ಈ ಅವಾರ್ಡ್ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಹಾಜರಿ ಹಾಕಿದ್ದರು. ಈ ಕಾರ್ಯಕ್ರಮದಲ್ಲಿ 1800ಕ್ಕೂ ಹೆಚ್ಚು ಕನ್ನಡಿಗರು ಭಾಗಿಯಾಗಿದ್ದರು.

‘ನನಗೆ ಅನೇಕ ಕಾರ್ಯಕ್ರಮಕ್ಕೆ ಬರೋಕೆ ಆಹ್ವಾನ ಇತ್ತು. ಆದರೆ, ಯಾವುದಕ್ಕೂ ಬರೋಕೆ ಆಗಿರಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ನಾನು ಆಗಮಿಸಿದೆ. ನನಗೆ ನಿಜಕ್ಕೂ ಖುಷಿ ಆಗುತ್ತಿದೆ. ಕನ್ನಡಿಗರ ನೋಡಲು ಸಾಕಷ್ಟು ಸಂತೋಷ ಆಗುತ್ತಿದೆ. ಕನ್ನಡಿಗರಿಂದಾಗಿ ನಾನು ಇಲ್ಲಿದ್ದೇನೆ’ ಎಂದರು ರಿಷಬ್ ಶೆಟ್ಟಿ.

‘ಕಾಂತಾರ’ ಚಿತ್ರವನ್ನು ವಿಶ್ವದ ಅನೇಕರು ನೋಡಿದ್ದಾರೆ. ಆ ಸಾಲಿನಲ್ಲಿ ಟ್ರಸ್ಫರ್ಡ್ ಕೂಡ ಇದ್ದಾರೆ! ಈ ಚಿತ್ರವನ್ನು ಯೂನಿವರ್ಸಲ್ ಸಿನಿಮಾ ಎಂದು ಅವರು ಕರೆದಿದ್ದಾರೆ. ಅಮೆರಿಕ ಹಾಗೂ ವಾಷಿಂಗ್ಟನ್​ಗೆ ಕನ್ನಡಿಗರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಟ್ರಸ್ಫರ್ಡ್ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕಾಂತಾರ 2 ಸಿನಿಮಾದ ಬಗ್ಗೆ ಸಪ್ತಮಿ ಗೌಡ ಮಾತನಾಡಿದ್ದಾರೆ: ಲೀಲಾ ಇರ್ತಾಳಾ?

ವಾಷಿಂಗ್ಟನ್​ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್​ಗೆ 95 ವರ್ಷಗಳ ಇತಿಹಾಸ ಇದೆ‌. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿ ಹಲವು ಗಣ್ಯರು ಈ ವೇದಿಕೆ ಮೇಲೆ ನಿಂತು ಭಾಷಣ ಮಾಡಿದ್ದರು. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ‌ ಅನ್ನೋದು ವಿಶೇಷ. ಇಂಥ ಥಿಯೇಟರ್​​ನಲ್ಲಿ ರಿಷಬ್ ಶೆಟ್ಟಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪಡೆದಿರೋದು ವಿಶೇಷ. ಈ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:56 am, Wed, 28 June 23