
ಟೀಸರ್ ಮೂಲಕ ‘ಕರಿಕಾಡ’ ಸಿನಿಮಾ (Karikada Movie) ಗಮನ ಸೆಳೆದಿದೆ. ಈಗ ಈ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. 2026ರ ಫೆಬ್ರವರಿ 6ಕ್ಕೆ ಸಿನಿಮಾ ತೆರೆಕಾಣಿಸಲು ಚಿತ್ರತಂಡ ರೆಡಿಯಾಗಿದೆ. ಪಂಚಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇದೊಂದು ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಟೀಸರ್ ನೋಡಿದ ಬಳಿಕ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಭರವಸೆ ಹುಟ್ಟಿದೆ. ಆ್ಯಕ್ಷನ್, ಲವ್ ಸ್ಟೋರಿ, ಅದ್ದೂರಿ ಮೇಕಿಂಗ್, ಪ್ರತಿಭಾವಂತ ಕಲಾವಿದರ ಬಳಗ, ಹಿನ್ನೆಲೆ ಸಂಗೀತ ಸೇರಿದಂತೆ ಹಲವು ಅಂಶಗಳು ‘ಕರಿಕಾಡ’ (Karikada) ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.
‘ಕರಿಕಾಡ’ ಸಿನಿಮಾದಲ್ಲಿ ಕಾಡ ನಟರಾಜ್ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ಬಲರಾಜವಾಡಿ, ಯಶ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ನಿರೀಕ್ಷಾ ಶೆಟ್ಟಿ ಅವರು ನಾಯಕಿಯಾಗಿದ್ದಾರೆ. ಮಂಜು ಸ್ವಾಮಿ, ದಿವಾಕರ್, ಗೋವಿಂದೇ ಗೌಡ, ಕಾಮಿಡಿ ಕಿಲಾಡಿ ಸೂರ್ಯ, ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಕರಿಸುಬ್ಬು, ಚಂದ್ರಪ್ರಭ , ಗಿರಿ, ಆರ್ಯನ್, ರಿದ್ಧಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
‘ರಿದ್ಧಿ ಎಂಟರ್ಟೈನ್ಮೆಂಟ್ಸ್’ ಮೂಲಕ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ಅವರು ನಿರ್ಮಾಣ ಮಾಡಿದ್ದಾರೆ. ಸ್ನೇಹಿತರಾದ ರವಿಕುಮಾರ್ ಎಸ್.ಆರ್. ಕೂಡ ನಿರ್ಮಾಣದ ಸಾಥ್ ನೀಡಿದ್ದಾರೆ. ಈ ಸಿನಿಮಾವನ್ನ ಗಿಲ್ಲಿ ವೆಂಕಟೇಶ್ ಅವರು ನಿರ್ದೇಶಿಸಿದ್ದಾರೆ. ಕಾಡ ನಟರಾಜ ಅವರೇ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಮತ್ತು ಶಶಾಂಕ್ ಶೇಷಾಗಿರಿ ಅವರು ಸಂಗೀತ ನೀಡಿದ್ದಾರೆ.
ಶಶಾಂಕ್ ಶೇಷಾಗರಿ ಅವರು ಹಾಡುಗಳಿಗೆ ಸಂಗೀತ ನೀಡುವುದರ ಜೊತೆ ಹಿನ್ನಲೆ ಸಂಗೀತ ಕೂಡ ನೀಡಿದ್ದಾರೆ. ಜೀವನ್ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ದೀಪಕ್ ಸಿ.ಎಸ್. ಅವರ ಸಂಕಲನ ಈ ಸಿನಿಮಾಗಿದೆ. ‘ಕರಿಕಾಡ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಬಳಿಕ ಪರಭಾಷೆ ಮಂದಿ ಕೂಡ ಈ ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ: ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಷಿ; ಫಸ್ಟ್ ಲುಕ್ ರಿಲೀಸ್
ಕನ್ನಡದ ಪ್ರತಿಭೆಗಳು ಮಾಡಿರುವ ಈ ಸಿನಿಮಾವನ್ನು ನೋಡಿ ಬಾಲಿವುಡ್ ಫಿಲ್ಮ್ ಟ್ರೇಡರ್ಸ್ ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಫೆಬ್ರವರಿ 6ರಂದು ಸಿನಿಮಾ ಬಿಡುಗಡೆ ಆಗಲಿದೆ. ವಿಶ್ವಾದ್ಯಂತ 1200ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಗೆ ಮಾಡುವ ತಯಾರಿ ನಡೆಯುತ್ತಿದೆ. ಕರ್ನಾಟಕದ ಜೊತೆ ಹಿಂದಿ ಮಾರ್ಕೆಟ್ನಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡದ ಪ್ಲ್ಯಾನ್ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.