ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 500 ಕೋಟಿ ರೂಪಾಯಿಗಳ ಲಾಕ್ಡೌನ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಪ್ಯಾಕೇಜ್ನಲ್ಲಿ ಚಿತ್ರರಂಗದ ಕಾರ್ಮಿಕರನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ತಲಾ 3000 ರೂಪಾಯಿ ನೀಡಲಾಗುತ್ತಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ನಿಂದ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ, ಇವರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಸರ್ಕಾರ ಇದಕ್ಕೆ ಈಗ ಸ್ಪಂದಿಸಿದೆ.
ಕೊವಿಡ್ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು. ಇನ್ನು, ಸಾಕಷ್ಟು ಸಿನಿಮಾಗಳು ಘೋಷಣೆ ಆಗಿ, ಶೂಟಿಂಗ್ ಕೂಡ ಶುರುವಾಗಿತ್ತು. ಹೀಗಾಗಿ, ಎಲ್ಲವೂ ಮತ್ತೆ ಮೊದಲಿನಂತಾಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಏಕಾಏಕಿ ಕೊವಿಡ್ ಎರಡನೇ ಅಲೆ ಹೆಚ್ಚಿದ್ದರಿಂದ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತೀಚೆಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸಿನಿಮಾ ಕಾರ್ಮಿಕರಿಗೆ 2ನೇ ಹಂತದಲ್ಲಿ ಪ್ಯಾಕೇಜ್ ರಿಲೀಸ್ ಮಾಡುತ್ತಿದ್ದೇವೆ. ಇದರಲ್ಲಿ ಸಿನಿಮಾ ತಂತ್ರಜ್ಞರು, ಕಾರ್ಮಿಕರ ಸೇರ್ಪಡೆ ಮಾಡುತ್ತಿದ್ದೇವೆ ಎಂದಿದ್ದರು. ಅಂತೆಯೇ ಸರ್ಕಾರ ಈಗ ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿ ನೀಡುತ್ತಿದೆ. ಕರ್ನಾಟಕದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: Lockdown Guidelines: ಜೂನ್ 14ರವರೆಗೆ ಲಾಕ್ಡೌನ್ ಮುಂದುವರಿಕೆ; 500 ಕೋಟಿ ಆರ್ಥಿಕ ಪ್ಯಾಕೇಜ್: ಸಿಎಂ ಯಡಿಯೂರಪ್ಪ ಘೋಷಣೆ
Published On - 5:54 pm, Thu, 3 June 21