ಈ ವಾರದ ಟಾಸ್ಕ್ಗಳಲ್ಲಿ ಮನೆಯ ಹಲವು ಮಂದಿ ಕೆಟ್ಟದಾಗಿಯೇ ಆಡಿದ್ದರು, ಒಬ್ಬರು ರಾಕ್ಷಸತನ ತೋರಿದರೆ ಅದಕ್ಕೆ ಬದಲಾಗಿ ದುಪ್ಪಟ್ಟು ರಾಕ್ಷಸತನ ಪ್ರದರ್ಶಿಸಿದರು. ಆದರೆ ವಾರಾಂತ್ಯಕ್ಕೆ ಮುನ್ನ ಒಬ್ಬ ಕಳಪೆ ಹಾಗೂ ಒಬ್ಬ ಉತ್ತಮನ್ನು ಮಾತ್ರ ಆರಿಸುವ ಅವಕಾಶ ಮನೆಯ ಸದಸ್ಯರಿಗಿರುವುದು ನಿಯಮ. ಅಂತೆಯೇ ಮನೆಯ ಸದಸ್ಯರ ಬಹುಮತದಂತೆ ಕಾರ್ತಿಕ್ (Karthik Gowda) ಈ ವಾರದ ಕಳಪೆ ಸ್ಪರ್ಧಿಯಾದರು. ವಿನಯ್ ಜೊತೆ ಜಗಳ, ಅವಾಚ್ಯ ಶಬ್ದದ ಬಳಕೆ ಇನ್ನಿತರೆ ಕಾರಣಗಳನ್ನು ಸ್ಪರ್ಧಿಗಳು ನೀಡಿದರು. ಸಂಗೀತಾ ಗಾಯಗೊಂಡು ಹೊರಗೆ ಹೋಗಿದ್ದ ಕಾರಣ ಎಲ್ಲರ ಗುರಿ ಕಾರ್ತಿಕ್ ಆದರು ಎಂಬುದು ಸಹ ನಿಜವೇ.
ಈ ವಾರದ ಉತ್ತಮ ಇಬ್ಬರಾದರು ಎಂಬುದು ವಿಶೇಷ. ಅದರಲ್ಲಿಯೂ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್ ಹಾಗೂ ಪವಿ ಇಬ್ಬರೂ ಸಮಾನ ಮತಗಳನ್ನು ಪಡೆದ ಕಾರಣ ಇಬ್ಬರಿಗೂ ಉತ್ತಮ ನೀಡಲಾಯ್ತು. ಅವಿನಾಶ್, ಟಾಸ್ಕ್ ಆಡುವ ಸಂದರ್ಭದಲ್ಲಿ ಯಾವುದೇ ದೂರು ಹೇಳದೆ, ಟಾಸ್ಕ್ನ ನಿಯಮಗಳಿಗೆ ಬದ್ಧವಾಗಿದ್ದ ಕಾರಣ ಅವರು ಉತ್ತಮ ಎನ್ನಿಸಿಕೊಂಡರು. ಟಾಸ್ಕ್ಗಳಲ್ಲಿ ಅಗ್ರೆಶನ್ ತೋರಿಸಿದ್ದಕ್ಕೆ ಹಾಗೂ ಚೇರ್ ಟಾಸ್ಕ್ನಲ್ಲಿ ಏಳದೆ ಕೂತೇ ಇದ್ದು ತಂಡವನ್ನು ಗೆಲ್ಲಿಸಿದ್ದಕ್ಕೆ ಪವಿಗೆ ಉತ್ತಮ ನೀಡಲಾಯ್ತು.
ಇನ್ನು ಮನೆಯ ಕ್ಯಾಪ್ಟನ್ಸಿ ಟಾಸ್ಕ್ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಈ ಬಾರಿ ಸ್ನೇಹಿತ್ಗೆ ನೀಡಲಾಗಿತ್ತು, ಕಳೆದ ವಾರದ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಮನೆಯ ಯಾವ ಸದಸ್ಯರು ಕ್ಯಾಪ್ಟೆನ್ಸಿ ಟಾಸ್ಕ್ ಆಡಬಹುದು ಎಂದು ನಿರ್ಧರಿಸುವ ಅಧಿಕಾರವನ್ನು ಬಿಗ್ಬಾಸ್ನಿಂದ ಪಡೆದಿದ್ದರು.
ಇದನ್ನೂ ಓದಿ:‘ವಿನಯ್, ನಮ್ರತಾ ನಿಯಮ ಪಾಲಿಸಿಲ್ಲ’; ಇಬ್ಬರನ್ನೂ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟ ಸ್ನೇಹಿತ್
ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್ರನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಆಚೆ ಇಟ್ಟರು, ಬಳಿಕ ತಮ್ಮದೇ ಗೆಳೆಯರಾದ ವಿನಯ್ ಹಾಗೂ ನಮ್ರತಾರನ್ನು ತೆಗೆದರು. ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿತು. ಬಳಿಕ ತನಿಷಾ, ಡ್ರೋಪ್ ಪ್ರತಾಕ್, ತುಕಾಲಿ ಸಂತು, ಪವಿ ಅವರುಗಳನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರತೆಗೆದರು.
ಉಳಿದ ಸಿರಿ, ಅವಿನಾಶ್, ಮೈಖಲ್, ವರ್ತೂರು ಸಂತೋಷ್ ನಡುವೆ ಟಾಸ್ಕ್ ನಡೆಯಿತು. ತಿರುಗುವ ಕುರ್ಚಿಯ ಮೇಲೆ ಕೂತು, ಮನೆಯ ಸದಸ್ಯರೆಲ್ಲ ಮಾಡುತ್ತಿರುವ ಗಲಾಟೆಯ ನಡುವೆ 13 ನಿಮಿಷಗಳನ್ನು ಮನಸ್ಸಿನಲ್ಲಿಯೇ ಎಣಿಸಿ ಸರಿಯಾಗಿ ಗಂಟೆ ಹೊಡೆಯುವವರು ಟಾಸ್ಕ್ ಗೆಲ್ಲುತ್ತಾರೆ ಎಂಬುದು ನಿಯಮವಾಗಿತ್ತು. 13 ನಿಮಿಷಕ್ಕೆ 45 ಸೆಕೆಂಡ್ಗಳಷ್ಟೆ ಕಡಿಮೆ ಲೆಕ್ಕಹಾಕಿ ಗಂಟೆ ಹೊಡೆದ ವರ್ತೂರು ಸಂತೋಷ್ ಕ್ಯಾಪ್ಟನ್ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ