
‘ಕಾಂತಾರ’ ರಿಲೀಸ್ ಆದ ಬಳಿಕ ದೈವದ ಬಗ್ಗೆ ಹಾಗೂ ತುಳುನಾಡಿನ ಸಂಸ್ಕೃತಿ ಬಗ್ಗೆ ಅನೇಕರಿಗೆ ಪರಿಚಯ ಆಗಿದೆ. ದೇಶ-ವಿದೇಶಗಳಲ್ಲಿ ಇದರ ಜನಪ್ರಿಯತೆ ಹಬ್ಬಿದೆ. ಈಗ ದೈವದ ಕುರಿತು ಹೊಸ ಸಿನಿಮಾ ರಿಲೀಸ್ಗೆ ರೆಡಿ ಇದೆ. ಚಿತ್ರದ ಹೆಸರು ‘ಕಟ್ಟೆಮಾರ್’. ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಕಟ್ಟೆಮಾರ್’ ಚಿತ್ರದಲ್ಲಿ ದೈವಾರಾಧನೆ ವಿಷಯ ಹೇಳಲಾಗುತ್ತಿದೆಯೇ? ಇಲ್ಲ. ದೈವ ಯಾವ ರೀತಿಯಲ್ಲಿ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳುವ ಪ್ರಯತ್ನವನ್ನು ತಂಡ ಮಾಡಿದೆ. ಎಲ್ಲಿಯೂ ಆಡಂಬರವಿಲ್ಲದೆ, ದೈವಾರಾಧನೆ ತೋರಿಸದೇ ಸಿನಿಮಾ ತಯಾರಾಗಿದೆ. ತುಳುನಾಡಿನ ನಂಬಿಕೆಗಳ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿತ್ತಿದೆ. ಈ ಚಿತ್ರದಲ್ಲಿ ಪ್ರೇಮಕಥೆ, ಸಸ್ಪೆನ್ಸ್ ವಿಷಯಗಳು ಕೂಡ ಇವೆ. ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಸಿದ್ಧಪಡಿಸಲಾಗಿದೆ ಎಂಬುದು ತಂಡದ ಮಾತು.
‘ಕಟ್ಟೆಮಾರ್’ ಚಿತ್ರವನ್ನು ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನ ಮಾಡಿದ್ದಾರೆ. ಜನವರಿ 23ರಂದು ಈ ಚಿತ್ರ ತುಳುವಿನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಕನ್ನಡದಲ್ಲಿ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಕಾಣಲಿದೆ. ಬಿಡುಗಡೆ ಕಂಡಿರುವ ಟ್ರೇಲರ್ ಗಮನ ಸೆಳೆದಿದೆ.
‘ಸು ಫ್ರಮ್ ಸೋ’ ಬಳಿಕ ಜೆಪಿ ತುಮಿನಾಡು ಜನಪ್ರಿಯತೆ ಹೆಚ್ಚಿದೆ. ಅವರು ಒಂದು ಕಥೆ ಒಪ್ಪಿಕೊಳ್ಳುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿರುತ್ತದೆ. ಈಗ ‘ಕಟ್ಟೆಮಾರ್’ ಸಿನಿಮಾ ಮೂಲಕ ಅವರು ಮತ್ತೆ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಆದಷ್ಟು ಬೇಗ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿ ಎಂಬುದು ಅಭಿಮಾನಿಗಳ ಕೋರಿಕೆ.
ಇದನ್ನೂ ಓದಿ: ಜೆಪಿ ತುಮಿನಾಡುಗೆ ಮುಂದಿದೆ ದೊಡ್ಡ ಸವಾಲು
ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ ಚಿತ್ರಕ್ಕಿದೆ. ವಿಶ್ವಾಸ್ ಅಡ್ಯಾರ್, ಆರ್.ಕೆ.ಮುಲ್ಕಿ, ವಿನೋದ್ ಶೆಟ್ಟಿ ಕೃಷ್ಣಾಪುರ, ಸಂದೇಶ್ ಉಕ್ಕುಡ ನಿರ್ದೇಶನ ತಂಡದಲಿದ್ದಾರೆ. ಅಸ್ತ್ರ ಪ್ರೊಡಕ್ಷನ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.