ಶಶಾಂಕ್ ನಿರ್ದೇಶನದ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಸೂಪರ್ ಹಿಟ್ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುತ್ತಿದೆ. ಕೌಟುಂಬಿಕ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ ನಾಗರಾಜ್, ಬೃಂದಾ ಆಚಾರ್ಯ, ರಂಗಾಯಣ ರಘು, ನಾಗಭೂಷಣ ಮುಂತಾದವರು ನಟಿಸಿದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಗೆಲುವನ್ನು ಸಂಭ್ರಮಿಸಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ಯಶಸ್ಸಿನ ಖುಷಿಯಲ್ಲೇ ಎಲ್ಲರೂ ವೇದಿಕೆ ಮೇಲೆ ಮಾತನಾಡಿದ್ದಾರೆ. ಶಶಾಂಕ್ (Director Shashank) ಮತ್ತು ಬಿ.ಸಿ. ಪಾಟೀಲ್ ಅವರು ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೇರೆ ರಾಜ್ಯಗಳಲ್ಲೂ ಈ ಚಿತ್ರ ಉತ್ತಮವಾಗಿ ಪ್ರದರ್ಶನ ಕಂಡಿದೆ.
ಡಾರ್ಲಿಂಗ್ ಕೃಷ್ಣ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೂಲಕ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ. ‘ನಾನು ಈವರೆಗೂ ಕೇಳಿದ ದಿ ಬೆಸ್ಟ್ ಕಥೆ ಇದು. ಶಶಾಂಕ್ ಅವರು ಒಂದೇ ತಿಂಗಳಲ್ಲಿ ಈ ಕಥೆ ಸಿದ್ಧಪಡಿಸಿದ್ದರು. ಅವರ ಜೊತೆ ಫ್ಯಾಮಿಲಿ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ ಆಗಿತ್ತು. ತುಂಬ ಆಳವಾದ ವಿಷಯವನ್ನು ಶಶಾಂಕ್ ಅವರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಜನರು ಪ್ರತಿಕ್ರಿಯಿಸಿದ ರೀತಿ ನೋಡಿ ಬಹಳ ಖುಷಿ ಆಯಿತು. ಇಂಥ ಕಥೆಯನ್ನು ಇಟ್ಟುಕೊಂಡು ನನ್ನ ಜೊತೆ ಸಿನಿಮಾ ಮಾಡಿದ್ದಕ್ಕೆ ಶಶಾಂಕ್ ಮತ್ತು ಬಿ.ಸಿ. ಪಾಟೀಲ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.
ಈ ಸಿನಿಮಾ ನೋಡಿದ ಬಳಿಕ ಮಿಲನಾ ನಾಗರಾಜ್ ಅವರ ನಟನೆಗೆ ಎಲ್ಲರಿಂದ ಪ್ರಶಂಸೆ ಸಿಕ್ಕಿದೆ. ‘ಶಶಾಂಕ್ ಅವರಿಗೆ ನಾನು ದೊಡ್ಡ ಅಭಿಮಾನಿ. ಅವರ ಆತ್ಮವಿಶ್ವಾಸ ಮೆಚ್ಚುವಂಥದ್ದು. ಬೃಂದಾ ಆಚಾರ್ಯ ಅವರ ನಟನೆಯನ್ನು ನೋಡಿ ನಾನು ಇಂಪ್ರೆಸ್ ಆದೆ. ಎಲ್ಲರ ನಟನೆಯೂ ನನಗೆ ಇಷ್ಟ ಆಯ್ತು. ಬಿ.ಸಿ. ಪಾಟೀಲ್ ಮತ್ತು ಸೃಷ್ಟಿ ಪಾಟೀಲ್ ಅವರಿಂದ ನಮಗೆ ಆನೆಬಲ ಬಂತು’ ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ.
ನಿರ್ದೇಶಕ ಶಶಾಂಕ್ ಕೂಡ ಈ ಗೆಲುವಿನಿಂದ ಖುಷಿಯಾಗಿದ್ದಾರೆ. ‘ಎಲ್ಲರಿಗಿಂತ ಹೆಚ್ಚಾಗಿ ಇಂಥ ಒಂದು ಯಶಸ್ಸಿನ ಅವಶ್ಯಕತೆ ನನಗೆ ಇತ್ತು. ತುಂಬ ದಿನ ಆದ್ಮೇಲೆ ನಾನು ಈ ರೀತಿಯ ಸಕ್ಸಸ್ಮೀಟ್ನಲ್ಲಿ ಭಾಗಿ ಆಗಿದ್ದೇನೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೇಬೇಕಿತ್ತು. ಹೊಸಬರು ಬಂದಾಗ ಸೀನಿಯರ್ ಡೈರೆಕ್ಟರ್ಗಳ ಕಾಲ ಮುಗಿಯಿತು ಎಂಬ ಮಾತು ಬರುತ್ತದೆ. ನಾವು ಕೂಡ ಒಳ್ಳೆಯ ನಿರ್ದೇಶಕರು ಅನ್ನೋದನ್ನು ಪದೇಪದೇ ಸಾಬೀತು ಮಾಡಿಕೊಳ್ಳಲೇಬೇಕು. ಈ ಯಶಸ್ಸು ಸಿಕ್ಕಿದ್ದಕ್ಕೆ ತುಂಬ ಖುಷಿ ಆಗಿದೆ. ಇದು ಕೃಷ್ಣಗಾಗಿಯೇ ಬರೆದ ಕಥೆ. ಬಿ.ಸಿ. ಪಾಟೀಲ್ ಅವರ ಕೂಡ ಕಥೆ ಇಷ್ಟಪಟ್ಟು ನಿರ್ಮಾಣದಲ್ಲಿ ಕೈ ಜೋಡಿಸಿದ್ದಕ್ಕೆ ಈ ಚಿತ್ರ ಇಷ್ಟು ರಿಚ್ ಆಗಿ ಮೂಡಿಬಂತು. ಗುಣಮಟ್ಟದಲ್ಲಿ ರಾಜಿ ಆಗಿಲ್ಲ’ ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.
ಇದನ್ನೂ ಓದಿ: Darling Krishna: ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ನೋಡಿ ಮನಸಾರೆ ಹೊಗಳಿದ ಪ್ರೇಕ್ಷಕರು; ಚಿತ್ರತಂಡಕ್ಕೆ ಖುಷಿಯೋ ಖುಷಿ
‘ಬಹುದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದ್ದಕ್ಕೆ ಖುಷಿ ಆಯ್ತು. ಎಲ್ಲರ ಭಾವನೆ ಕೂಡ ಇದೇ ಆಗಿದೆ. ಈಗಾಗಲೇ ಸಿನಿಮಾ ಯಶಸ್ವಿಯಾಗಿದೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆಗಸ್ಟ್ 4ರಂದು ಅಮೆರಿಕ, ಸೌತ್ ಆಫ್ರಿಕಾ ಮುಂತಾದ ಕಡೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಕೆಲವು ನಿರ್ಮಾಪಕರು ಅಷ್ಟು ಕೋಟಿ ಆಯ್ತು, ಇಷ್ಟು ಕೋಟಿ ಆಯ್ತು ಅಂತ ಸುಳ್ಳು ಹೇಳ್ತಾರೆ. ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬುದಕ್ಕಿಂತ ನಮ್ಮ ಸಿನಿಮಾ ಜನರನ್ನು ತಲುಪಿದೆ ಎಂಬುದು ಮುಖ್ಯ. ನಮ್ಮ ನಿರೀಕ್ಷೆಗೆ ತಕ್ಕಂತೆ ಕಲೆಕ್ಷನ್ ಆಗಿದೆ. ಈ ಥರ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ಕೂಡ ನಿರ್ದೇಶಕರ ಸಾಹಸ’ ಎಂದು ಹೇಳಿದ್ದಾರೆ ನಿರ್ಮಾಪಕ ಬಿ.ಸಿ. ಪಾಟೀಲ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.