ಬಾಲಿವುಡ್ನ (Bollywood) ಸ್ಟಾರ್ ನಟಿಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ, ರವೀನಾ ಟಂಡನ್, ಸೊನಾಲಿ ಬೇಂದ್ರೆ, ಕಾಜೊಲ್, ಮನಿಷಾ ಕೊಯಿರಾಲಾ ಇನ್ನೂ ಹಲವಾರು ನಟಿಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣದ ನಟಿಯರು ಬಾಲಿವುಡ್ನಲ್ಲಿ ನಟಿಸಿದ್ದಾರಾದರೂ ಸಂಖ್ಯೆ ಕಡಿಮೆಯೇ, ಆದರೆ ಇತ್ತೀಚೆಗೆ ದಕ್ಷಿಣದ ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇದೀಗ ನಟಿ ಕೀರ್ತಿ ಸುರೇಶ್ (Keerthy Suresh) ಸಹ ಬಾಲಿವುಡ್ನತ್ತ ಮುಖ ಮಾಡಿದ್ದಾರೆ.
‘ಮಹಾನಟಿ’ ಸಿನಿಮಾ ಮೂಲಕ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್, ಗ್ಲಾಮರಸ್ ಹಾಗೂ ಅಭಿನಯ ಬೇಡುವ ಪಾತ್ರಗಳ ಎರಡೂ ಬಗೆಯನ್ನು ನಿಭಾಯಿಸುತ್ತಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟಿ. ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಹಲವು ನೆನಪುಳಿಯುವ ಪಾತ್ರಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್ಗೆ ಈಗ ಬಾಲಿವುಡ್ನಿಂದ ಬುಲಾವ್ ಬಂದಿದ್ದು ಬಾಲಿವುಡ್ನತ್ತ ಮುಖ ಮಾಡಿದ್ದಾರೆ.
ಬಾಲಿವುಡ್ನ ಸ್ಟಾರ್ ನಟ ವರುಣ್ ಧವನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಂತೆ. ವಿಶೇಷವೆಂದರೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿರುವುದು ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ. ಪ್ರಸ್ತುತ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ನಿರ್ದೇಶಿಸಿ ಬಾಲಿವುಡ್ಗೆ ಪದಾರ್ಪಣೆ ಮಾಡಿರುವ ಅಟ್ಲಿ, ಈಗಾಗಲೇ ಎರಡನೇ ಬಾಲಿವುಡ್ ಪ್ರಾಜೆಕ್ಟ್ ಅನ್ನು ಬಾಚಿಕೊಂಡಿದ್ದು, ಇದಕ್ಕಾಗಿ ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ಅನ್ನು ಮುಖ್ಯ ಪಾತ್ರಗಳಿಗೆ ಆರಿಸಿಕೊಂಡಿದ್ದಾರೆ.
ಇದನ್ನೂ ಓದಿ:Keerthy Suresh: ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಪಡೆಯುವ ಕೀರ್ತಿ ಸುರೇಶ್ ಅವರ ಮೊದಲ ಸಂಭಾವನೆ ಎಷ್ಟು?
ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವರ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನಿಮಾಕ್ಕೆ ಬಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆ ಹಣ ಹೂಡಲಿದ್ದು, ಅಟ್ಲಿಯ ಸೂಪರ್ ಹಿಟ್ ತಮಿಳು ಸಿನಿಮಾ ‘ರಾಜಾ-ರಾಣಿ’ಯ ರೀಮೇಕ್ ಇದಾಗಿರಲಿದೆ ಎನ್ನಲಾಗುತ್ತಿದೆ. ತಮಿಳಿನಲ್ಲಿ ನಯನತಾರಾ ನಟಿಸಿದ್ದ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಲಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಕೀರ್ತಿ ಸುರೇಶ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಭೋಲಾ ಶಂಕರ್ ಸಿನಿಮಾದಲ್ಲಿ ಕೀರ್ತಿ ನಟಿಸಿದ್ದು ಸಿನಿಮಾ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಅದಾದ ಬಳಿಕ ‘ಸೈರನ್’, ‘ರಘು ತಾತ’, ‘ರಿವಾಲ್ವರ್ ರೀಟಾ’, ‘ಕನ್ನೈವೇಡಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಈಗ ಬಾಲಿವುಡ್ ಸಿನಿಮಾ ಸಹ ಸೇರಿಕೊಂಡಿದೆ. ಇನ್ನು ವರುಣ್ ಧವನ್ ಸಹ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಸಮಂತಾ ಜೊತೆಗಿನ ವೆಬ್ ಸರಣಿ ‘ಸಿಟಾಡೆಲ್’ ಚಿತ್ರೀಕರಣ ಮುಗಿಸಿದ್ದಾರೆ. ಜಾನ್ಹವಿ ಕಪೂರ್ ಜೊತೆ ನಟಿಸಿರುವ ‘ಬವಾಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಬೇಡಿಯಾ 2’ ಸಿನಿಮಾ ಶುರು ಮಾಡಲಿದ್ದಾರೆ. ಅದರ ಜೊತೆಗೆ ಹೊಸ ಸಿನಿಮಾವೂ ಸಹ ಪ್ರಾರಂಭವಾಗಲಿದೆ. ಇನ್ನು ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂಗು ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ