ಚಿತ್ರರಂಗದಲ್ಲಿ ಯಶಸ್ಸು ಸಿಗಬೇಕು ಎಂದರೆ ಹತ್ತು ಹಲವು ವರ್ಷಗಳು ಕಾಯಬೇಕು. ರಾತ್ರೋರಾತ್ರಿ ಇಲ್ಲಿ ಏನೂ ಆಗುವುದಿಲ್ಲ. ದಶಕಗಳ ಕಾಲ ಕಾಯುವ ತಾಳ್ಮೆ ಇಟ್ಟುಕೊಂಡು ಕಷ್ಟಪಡುವವರಿಗೆ ಒಂದಲ್ಲಾ ಒಂದು ದಿನ ಮನ್ನಣೆ ಸಿಗುತ್ತದೆ. ಅದಕ್ಕೆ ಈಗ ನಿರ್ದೇಶಕ ರಾಜ್ಗುರು (Rajguru B) ಅವರೇ ಸಾಕ್ಷಿ. ಕಳೆದ 16 ವರ್ಷಗಳಿಂದ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕನಾಗಿ ಅವರು ಆ್ಯಕ್ಷನ್-ಕಟ್ ಹೇಳಿದ ‘ಕೆರೆಬೇಟೆ’ (Kerebete) ಸಿನಿಮಾ ಮಾರ್ಚ್ 15ರಂದು ತೆರೆಕಂಡಿದೆ. ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.
ಮೊದಲ ಸಿನಿಮಾದ ನಿರ್ದೇಶನದಿಂದ ರಾಜ್ಗುರು ಅವರಿಗೆ ಒಂದು ಮನ್ನಣೆ ಸಿಕ್ಕಿದೆ. ಮೂಲತಃ ಸೊರಬದವರಾದ ಅವರು ಮಲೆನಾಡಿನ ಫ್ಲೇವರ್ ಇರುವ ಕಥೆಯನ್ನು ‘ಕೆರೆಬೇಟೆ’ ಸಿನಿಮಾದಲ್ಲಿ ತೋರಿಸಿದ್ದಾರೆ. ಅವರ ಕಥೆಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ನಟ ಗೌರಿಶಂಕರ್ ಅವರ ನಟನೆಗೂ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಕಾದಿದ್ದ ನಿರ್ದೇಶಕ ರಾಜ್ಗುರು ಅವರು ಮೊದಲ ಸಿನಿಮಾದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ.
ಸೂಕ್ತ ಅವಕಾಶ ಸಿಗಬೇಕು ಎಂದರೆ ಹಲವು ವರ್ಷ ಕಾಯಲೇಬೇಕು. ಆದರೆ ಅಷ್ಟು ವರ್ಷಗಳ ಕಾಲ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ರಾಜ್ಗುರು ಅವರು ಸ್ಕ್ರಿಪ್ಟ್ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದರು. ಈಗ ಅವರ ಬಳಿಕ 10 ಸ್ಕ್ರಿಪ್ಟ್ಗಳು ಸಿದ್ಧವಾಗಿವೆ. ಮುಂದಿನ ಜರ್ನಿಗೆ ಬೇಕಾದ ಎಲ್ಲ ಸಿದ್ಧತೆಯನ್ನು ಅವರು ಮಾಡಿಕೊಂಡಿದ್ದಾರೆ. ನಿರ್ದೇಶಕರು ಒಂದು ಒಳ್ಳೆಯ ಸ್ಕ್ರಿಪ್ಟ್ ಮಾಡಿಕೊಂಡರೆ ಒಂದು ಸೈಟ್ ಖರೀದಿಸಿ ಇಟ್ಟುಕೊಂಡಂತೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್
‘ಇದು ಒಟಿಟಿ ಯುಗ. ಆದರೆ ನಮ್ಮ ಕೆರೆಬೇಟೆ ಸಿನಿಮಾದಲ್ಲಿ ನಾವು ಹೇಳಿದ ಕಥೆ ಹಳೇ ಕಾಲದ್ದು. ಆದರೆ ಇಂದಿಗೂ ಅದು ಅನ್ವಯ ಆಗುತ್ತದೆ. ಡಿಜಿಟಲ್ ಯುಗದಲ್ಲಿ ಜನರು ನಮ್ಮ ಸಿನಿಮಾವನ್ನು ಮೆಚ್ಚಿಕೊಂಡಿರುವುದಕ್ಕೆ ಖುಷಿ ಇದೆ’ ಎಂದು ರಾಜ್ಗುರು ಅವರು ಹೇಳಿದ್ದಾರೆ. ಒಳ್ಳೆಯ ವಿಮರ್ಶೆಗಳು ಸಿಕ್ಕರೂ ಕೂಡ ಕೆಲವೊಮ್ಮೆ ಕನ್ನಡದ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತದೆ. ಆ ಬಗ್ಗೆ ನಿರ್ದೇಶಕ ರಾಜ್ಗುರು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಒಳ್ಳೆಯ ಸಿನಿಮಾಗಳು ಬಂದರೆ ಮಾತ್ರ ಕನ್ನಡ ಚಿತ್ರರಂಗದ ಮೇಲೆ ಪ್ರೇಕ್ಷಕರಲ್ಲಿ ಮತ್ತೆ ಭರವಸೆ ಮೂಡಲು ಸಾಧ್ಯ ಎಂಬುದು ರಾಜ್ಗುರು ಅಭಿಪ್ರಾಯ.
ಮೊದಲ ಸಿನಿಮಾ ಸದ್ದು ಮಾಡುತ್ತಿರುವುದರಿಂದ ನಿರ್ದೇಶಕ ರಾಜ್ಗುರು ಅವರಿಗೆ ಈಗ ಬೇಡಿಕೆ ಬರುತ್ತಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಸಿನಿಮಾ ಮಂದಿ ಕೂಡ ‘ಕೆರೆಬೇಟೆ’ ಬಗ್ಗೆ ಮಾತಾಡುತ್ತಿದ್ದಾರೆ. ಸದ್ಯ ಎಲ್ಲವೂ ಮಾತುಕಥೆಗಳ ಹಂತದಲ್ಲಿವೆ. ಶೀಘ್ರದಲ್ಲೇ ರಾಜ್ಗುರು ಅವರ ಕಡೆಯಿಂದ ಗುಡ್ ನ್ಯೂಸ್ ಸಿಗುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.