ಪ್ರಶಾಂತ್​ ನೀಲ್​ ಜೊತೆ ದಳಪತಿ ವಿಜಯ್​ ಹೊಸ ಸಿನಿಮಾ? ಕೆಜಿಎಫ್​ ಡೈರೆಕ್ಟರ್​ ಬಗ್ಗೆ ಬಿಗ್​ ನ್ಯೂಸ್​

ಕಾಲಿವುಡ್​ನ ಸೂಪರ್​ ಸ್ಟಾರ್​ ದಳಪತಿ ವಿಜಯ್​ ಜೊತೆ ಪ್ರಶಾಂತ್​ ನೀಲ್​ ಸಿನಿಮಾ ಮಾಡುತ್ತಾರೆ ಎಂಬ ಮಾಹಿತಿ ಹರಡಿದೆ. ಆ ಚಿತ್ರಕ್ಕೆ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ.

ಪ್ರಶಾಂತ್​ ನೀಲ್​ ಜೊತೆ ದಳಪತಿ ವಿಜಯ್​ ಹೊಸ ಸಿನಿಮಾ? ಕೆಜಿಎಫ್​ ಡೈರೆಕ್ಟರ್​ ಬಗ್ಗೆ ಬಿಗ್​ ನ್ಯೂಸ್​
ದಳಪತಿ ವಿಜಯ್​ - ಪ್ರಶಾಂತ್​ ನೀಲ್​

Updated on: Mar 31, 2021 | 4:09 PM

‘ಕೆಜಿಎಫ್​’ ಸಿನಿಮಾದಿಂದಾಗಿ ಪ್ರಶಾಂತ್​ ನೀಲ್​ ಭರವಸೆಯ ನಿರ್ದೇಶಕ ಎಂಬುದು ಸಾಬೀತಾಯಿತು. ಅಲ್ಲದೆ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಬಂದಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಯ ದೊಡ್ಡ ದೊಡ್ಡ ಬ್ಯಾನರ್​ಗಳು ಪ್ರಶಾಂತ್​ಗಾಗಿ ಬಲೆ ಬೀಸುತ್ತಿವೆ. ತೆಲುಗು-ತಮಿಳಿನ ಸ್ಟಾರ್​ ನಟರು ಪ್ರಶಾಂತ್​ ಜೊತೆ ಸಿನಿಮಾ ಮಾಡುವ ಉತ್ಸಾಹ ತೋರಿಸುತ್ತಿದ್ದಾರೆ. ಆ ಕುರಿತಂತೆ ಈಗೊಂದು ಹೊಸ ಸುದ್ದಿ ಕೇಳಿಬರುತ್ತಿದೆ.

ಕಾಲಿವುಡ್​ನ ಸೂಪರ್​ ಸ್ಟಾರ್​ ದಳಪತಿ ವಿಜಯ್​ ಜೊತೆ ಪ್ರಶಾಂತ್​ ನೀಲ್​ ಸಿನಿಮಾ ಮಾಡುತ್ತಾರೆ ಎಂಬ ಮಾಹಿತಿ ಹರಡಿದೆ. ಆ ಚಿತ್ರಕ್ಕೆ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿನಿಮಾ ಕುರಿತಂತೆ ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಅಧಿಕೃತ ಘೋಷಣೆ ಆಗುವುದೊಂದೇ ಬಾಕಿ ಎಂದು ಹೇಳಲಾಗುತ್ತಿದೆ.

ಹರಿದಾಡುತ್ತಿರುವ ಈ ವಿಷಯದ ಬಗ್ಗೆ ಸದ್ಯಕ್ಕೆ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಪ್ರಶಾಂತ್​ ನೀಲ್ ಅವರಿಗೆ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್​ ಇದೆ ಎಂಬುದಕ್ಕೆ ಪದೇಪದೇ ಸಾಕ್ಷಿ ಸಿಗುತ್ತಿದೆ. ಸದ್ಯ ಅವರು ‘ಕೆಜಿಎಫ್ : ಚಾಪ್ಟರ್ 2’ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರಭಾಸ್​ ನಟನೆಯ ಸಲಾರ್​ ಚಿತ್ರದತ್ತಲೂ ಗಮನ ಹರಿಸಿದ್ದಾರೆ.

ಕೆಜಿಎಫ್​ ಯಶಸ್ಸಿನ ಬಳಿಕ ಪ್ರಭಾಸ್​ ಜೊತೆ ಕೆಲಸ ಮಾಡುವ ಅವಕಾಶ ಪ್ರಶಾಂತ್​ ನೀಲ್​ಗೆ ಒಲಿದುಬಂತು. ಅದರ ನಂತರ ಜ್ಯೂ. ಎನ್​ಟಿಆರ್​ ನಾಯಕತ್ವದ ಒಂದು ಸಿನಿಮಾಗೆ ಅವರು ಆ್ಯಕ್ಷನ್​-ಕಟ್​ ಹೇಳಬೇಕಿದೆ. ಆ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆ ನಿರ್ಮಾಣ ಮಾಡಲಿದೆ. ಆನಂತರವಷ್ಟೇ ದಳಪತಿ ವಿಜಯ್​ ಮತ್ತು ಪ್ರಶಾಂತ್ ನೀಲ್​ ಕಾಂಬಿನೇಷನ್​ನ ಸಿನಿಮಾ ಸೆಟ್ಟೇರಬೇಕಿದೆ.

ವಿಜಯ್​ ಕೂಡ ಸದ್ಯಕ್ಕೆ ಸಖತ್​ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ಮಾಸ್ಟರ್​ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ 65ನೇ ಚಿತ್ರದ ಬಗ್ಗೆ ನಿರೀಕ್ಷೆ ಜೋರಾಗಿದೆ. ಸನ್​ ಪಿಕ್ಚರ್ಸ್​ ಬ್ಯಾನರ್​ ಮೂಲಕ ಆ ಸಿನಿಮಾ ಮೂಡಿಬರಲಿದೆ. ಅದು ಮುಗಿದ ಬಳಿಕ ‘ಮಾಸ್ಟರ್​’ ನಿರ್ದೇಶಕ ಲೋಕೇಶ್​ ಕನಗರಾಜ್​ ಜೊತೆ ವಿಜಯ್​ ಇನ್ನೊಂದು ಸಿನಿಮಾ ಮಾಡುವ ನಿರೀಕ್ಷೆ ಇದೆ. ಆ ಚಿತ್ರದ ನಂತರವೇ ಪ್ರಶಾಂತ್​-ವಿಜಯ್​ ಒಂದಾಗಬಹುದು.

ಹೀಗೆ ಪ್ರಶಾಂತ್​ ನೀಲ್​ ಅವರು ಬ್ಯಾಕ್​ ಟು ಬ್ಯಾಕ್ ಪರಭಾಷೆಯ ಸ್ಟಾರ್​ ನಟರ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವುದು ಕೆಲವು ಅಭಿಮಾನಿಗಳಿಗೆ ಬೇಸರ ಉಂಟು ಮಾಡುವುದು ಸಹಜ. ಅವರು ‘ಸಲಾರ್​’ ಸಿನಿಮಾ ಒಪ್ಪಿಕೊಂಡಾಗಲೇ ಅನೇಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಆ ಚಿತ್ರಕ್ಕೆ ಪ್ರಭಾಸ್​ರನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂದು ನಂತರ ಪ್ರಶಾಂತ್​ ಸ್ಪಷ್ಟನೆ ನೀಡಬೇಕಾಯಿತು.

ಇದನ್ನೂ ಓದಿ: ಸಲಾರ್​ ನಂತರವೂ ಪ್ರಶಾಂತ್​ ನೀಲ್​ ಕನ್ನಡ ಸಿನಿಮಾ ಮಾಡೋದು ಡೌಟ್​; ಇಲ್ಲಿದೆ ಹೊಸ ನ್ಯೂಸ್​

Published On - 3:51 pm, Wed, 31 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us