ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕೆಜಿಎಫ್ 2’ ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಯಶ್ ನಾಯಕತ್ವದ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಆಡಿಯೋ ಹಕ್ಕುಗಳು ಮಾರಾಟ ಆಗಿವೆ. ಪ್ರತಿಷ್ಠಿತ ‘ಲಹರಿ ಮ್ಯೂಸಿಕ್’ ಕಂಪನಿಯು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಆಡಿಯೋ ರೈಟ್ಸ್ ಖರೀದಿ ಮಾಡಿದೆ. ಭಾರಿ ಮೊತ್ತಕ್ಕೆ ಹಕ್ಕುಗಳು ಸೇಲ್ ಆಗಿವೆ.
‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ಹಾಡಿನ ಹಕ್ಕುಗಳು ಕೂಡ ‘ಲಹರಿ ಮ್ಯೂಸಿಕ್’ ಪಾಲಾಗಿದ್ದವು. ಮೂಲಗಳ ಪ್ರಕಾರ, ಆಗ 3.60 ಕೋಟಿಗೆ ವ್ಯವಹಾರ ಕುದುರಿತ್ತು. ಆದರೆ ಈಗ ಅದಕ್ಕಿಂತಲೂ ದುಪ್ಪಟ್ಟ ಹಣ ನೀಡಿ ‘ಕೆಜಿಎಫ್: ಚಾಪ್ಟರ್ 2’ ಆಡಿಯೋವನ್ನು ಲಹರಿ ಸಂಸ್ಥೆ ಖರೀದಿಸಿದೆ. ಕೇಳಿಬಂದಿರುವ ಮಾಹಿತಿ ಪ್ರಕಾರ 6 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತಕ್ಕೆ ಆಡಿಯೋ ರೈಟ್ಸ್ ಮಾರಾಟ ಆಗಿದೆ. ಜು.1ರ ರಾತ್ರಿ 9 ಗಂಟೆಗೆ ಅಧಿಕೃತವಾಗಿಯೇ ಈ ಬಗ್ಗೆ ಮಾಹಿತಿ ಬಹಿರಂಗ ಆಗಲಿದೆ. ಆಗ ಪಕ್ಕಾ ಲೆಕ್ಕ ಸಿಗಲಿದೆ.
ಈ ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಎಲ್ಲ ಭಾಷೆಯ ಆಡಿಯೋ ರೈಟ್ಸ್ ಲಹರಿ ಸಂಸ್ಥೆಯ ಪಾಲಾಗಿದೆ.
ಆಡಿಯೋ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ಇಂದು (ಜು.1) ಹೊಂಬಾಳೆ ಫಿಲ್ಮ್ಸ್ ಜೊತೆ ಲಹರಿ ಸಂಸ್ಥೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಲಹರಿ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಅವರು ಇಂದು ಸಹಿ ಹಾಕಿದ್ದಾರೆ. ಆದಷ್ಟು ಬೇಗ ಆಡಿಯೋ ರಿಲೀಸ್ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ರೀತಿಯೇ ‘ಕೆಜಿಎಫ್: ಚಾಪ್ಟರ್ 2’ ಹಾಡುಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆದರೆ, ಜು.16ರಂದು ಚಿತ್ರವನ್ನು ತೆರೆಕಾಣಿಸಬೇಕು ಎಂಬುದು ನಿರ್ಮಾಪಕ ವಿಜಯ್ ಕಿರಗಂದೂರು ಅವರ ಆಲೋಚನೆ ಆಗಿತ್ತು. ಆದರೆ ಕೊರೊನಾ ವೈರಸ್ ಎರಡನೇ ಅಲೆ ಹಾವಳಿಯಿಂದಾಗಿ ಲಾಕ್ಡೌನ್ ಉಂಟಾದ ಪರಿಣಾಮ, ರಿಲೀಸ್ ದಿನಾಂಕ ಮತ್ತೆ ಮಂದೂಡುವುದು ಅನಿವಾರ್ಯ ಆಯಿತು. ಹೊಸ ರಿಲೀಸ್ ಡೇಟ್ ತಿಳಿದುಕೊಳ್ಳಲು ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಇದನ್ನೂ ಓದಿ:
ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್ 2; ಯಶ್-ಅಲ್ಲು ಅರ್ಜುನ್ ನಡುವೆ ಭಾರಿ ಪೈಪೋಟಿ
ಮುಗಿಯಿತು ರಕ್ಷಿತ್ Vs ಲಹರಿ ಕಿರಿಕ್; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ