ಈಗಾಗಲೇ ಟ್ರೇಲರ್ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸದ್ದು ಮಾಡಿರುವ ಕೆಜಿಎಫ್ 2 (KGF Chapter 2) ಸಿನಿಮಾ ಬಿಡುಗಡೆಗೆ ದೇಶ, ಭಾಷೆಯ ಗಡಿ ಮೀರಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಕೆಜಿಎಫ್ 1 ಹುಟ್ಟುಹಾಕಿದ ಸಂಚಲನದ ಅಲೆಯಲ್ಲಿಯೇ ಇನ್ನೂ ತೇಲುತ್ತಿರುವ ಅಭಿಮಾನಿಗಳಿಗೆ ಎರಡನೇ ಭಾಗ ಅಕ್ಷರಶಃ ಹಬ್ಬದ ಸಂಭ್ರಮವನ್ನು ಹುಟ್ಟುಹಾಕಲಿದೆ.
ಕೆಜಿಎಫ್ನಲ್ಲಿ ಗರುಡನನ್ನು ಸಂಹಾರ ಮಾಡಿದ ರಾಕಿ, ಮುಂದೆ ನರಾಚಿಯನ್ನ ವಶಪಡಿಸಿಕೊಂಡು ರಾಕಿಭಾಯ್ ಆಗ್ತಾರಾ? ಈ ನಿಟ್ಟಿನಲ್ಲಿ ಕೆಜಿಎಫ್ ಸುಲ್ತಾನ್ ಯಾರನ್ನೆಲ್ಲಾ ಎದುರಿಸಬೇಕು? ಎಂತೆಂತಹ ಸವಾಲುಗಳು ರಾಕಿ ಮುಂದೆ ಬರಲಿದೆ ಎನ್ನುವುದೇ ಕೆಜಿಎಫ್ 2 ಸಿನಿಮಾದ ತಿರುಳು ಎನ್ನಲಾಗುತ್ತಿದೆ. ಇದೆಲ್ಲವನ್ನೂ ನಿರ್ದೇಶಕ ಪ್ರಶಾಂತ್ ನೀಲ್ ಎಷ್ಟು ರಸವತ್ತಾಗಿ ಕಟ್ಟಿಕೊಡಲಿದ್ದಾರೆ ಎಂಬುವುದನ್ನು ನೋಡಲಿಕ್ಕಾಗಿ ಈಗ ಸಂಪೂರ್ಣ ಭಾರತೀಯ ಚಿತ್ರರಂಗ ಹಾಗೂ ಚಿತ್ರಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಈಗಾಗ್ಲೆ ಕೆಜಿಎಫ್ 2 ಹವಾ ಶುರುವಾಗಿದ್ದು, ತೆಲುಗಿನಲ್ಲಿ ಚಿತ್ರದ ರೈಟ್ಸ್ ಬರೋಬ್ಬರಿ ₹65ಕೋಟಿಗೆ ಸೇಲ್ ಆಗಿದೆ. ಜುಲೈ 16ಕ್ಕೆ ತೆರೆಗೆ ಬರೋದಕ್ಕೆ ರೆಡಿ ಆಗಿರೋ ಕೆಜಿಎಫ್ 2 ಸಿನಿಮಾದ ಬಗ್ಗೆ ಇದೀಗ ಇನ್ನೊಂದು ಅಚ್ಚರಿಯ ವಿಷಯ ಹೊರಬಿದ್ದಿದೆ. ಕೆಜಿಎಫ್ 2 ಸಿನಿಮಾವನ್ನು ಮೊದಲ ಭಾಗಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ರೀತಿಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಅದ್ದೂರಿಯಾಗಿ ಮೂಡಿಬಂದಿರೋ ಕೆಜಿಎಫ್ 2 ದೃಶ್ಯಗಳನ್ನು ವಿಶೇಷ ಕ್ಯಾಮರಾಗಳನ್ನ ಬಳಸಿ ಅತ್ಯದ್ಭುತವಾಗಿ ಶೂಟ್ ಮಾಡಲಾಗಿದೆಯಂತೆ. ಸಿನಿಪ್ರಿಯರು ಬಯಸುವುದಕ್ಕಿಂತ ಒಂದು ಪಟ್ಟು ಹೆಚ್ಚು ಅದ್ಭುತವಾಗಿಯೇ ಕೆಜಿಎಫ್2 ನಲ್ಲಿ ರೋಚಕ ದೃಶ್ಯಗಳು ಇರಲಿವೆಯಂತೆ.
ಕೆಜಿಎಫ್ 2 ಸಿನಿಮಾದಲ್ಲಿರಲಿದೆ ಅಂಡರ್‌ವಾಟರ್ ಸೀನ್
ಕೆಜಿಎಫ್ 2ನಲ್ಲಿ ಅಂಡರ್ ವಾಟರ್ ಸೀನ್ ಕೂಡ ಇರಲಿದೆ ಅನ್ನೋದು ಇದೀಗ ಸಿನಿಮಾ ಅಡ್ಡಾದಿಂದ ಬಂದಿರೋ ಹೊಚ್ಚಹೊಸ ಮಾಹಿತಿ. ಈ ಚಿತ್ರದಲ್ಲಿ ಅಂಡರ್ ವಾಟರ್ ಸೀನ್ ಚಿತ್ರೀಕರಿಸಲಾಗಿದ್ದು, ಫೈಟ್ ಸೀಕ್ವೆನ್ಸ್ ಸಹ ಇರಲಿದೆಯಂತೆ. ಈ ಬಗ್ಗೆ ಸ್ವತಃ ಅಂಡರ್‌ವಾಟರ್ ಫಿಲ್ಮ್ ಸರ್ವಿಸ್ ಟ್ವೀಟ್ ಮಾಡಿದೆ. ಆದ್ರೆ, ಈ ದೃಶ್ಯ ಯಾರ ಯಾರ ನಡುವೆ ಬರುತ್ತೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಆದ್ರೆ, ಈ ಸುದ್ದಿ ಹೊರಬಿದ್ದ ನಂತರ ಕೆಜಿಎಫ್ 2 ಮೇಲಿರುವ ಕುತೂಹಲ ಇನ್ನಷ್ಟು ಹೆಚ್ಚಾಗಿದ್ದು, ಅಭಿಮಾನಿಗಳಂತೂ ಉತ್ಸಾಹದ ಕಡಲಲ್ಲಿ ತೇಲುತ್ತಿರುವುದಂತೂ ಸತ್ಯ.
ಇದನ್ನೂ ಓದಿ:
ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ ಮನವಿ