‘ಕನ್ನಡ ಚಿತ್ರವನ್ನು ಹೃದಯದಲ್ಲಿ ಹೊತ್ತು ನಡೆಯುತ್ತೇನೆ’; ವಿಶೇಷ ಪ್ರತಿಜ್ಞೆ ಮಾಡಿದ ಸುದೀಪ್

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಯಶಸ್ವಿ ಪಯಣ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಅಭಿಮಾನಿಗಳು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು, ಮಾಧ್ಯಮ ಮತ್ತು ತಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ‘ಮಾನವೀಯತೆ’ ಕಲಿಸಿದ ಈ ಪಯಣದಲ್ಲಿ ಎಲ್ಲರ ಪಾತ್ರವನ್ನು ಸ್ಮರಿಸಿ, ಮುಂದೆಯೂ ಕಠಿಣ ಶ್ರಮದಿಂದ ಕಲೆಯನ್ನು ಗೌರವಿಸುವುದಾಗಿ ಸುದೀಪ್ ಭರವಸೆ ನೀಡಿದ್ದಾರೆ.

‘ಕನ್ನಡ ಚಿತ್ರವನ್ನು ಹೃದಯದಲ್ಲಿ ಹೊತ್ತು ನಡೆಯುತ್ತೇನೆ’; ವಿಶೇಷ ಪ್ರತಿಜ್ಞೆ ಮಾಡಿದ ಸುದೀಪ್
ಸುದೀಪ್

Updated on: Jan 31, 2026 | 3:13 PM

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಮೂಲಕ 2024 ಹಾಗೂ 2025ರಲ್ಲಿ ಅಭಿಮಾನಿಗಳನ್ನು ರಂಜಿಸಿದರು. ಸುದೀಪ್ ಅವರ ಸಿನಿ ಪಯಣಕ್ಕೆ ಇದೀಗ 30 ವರ್ಷ ವರ್ಷ. ಮೂರು ದಶಕಗಳ ಯಶಸ್ಸಿನ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರುಸಿದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ (ಜನವರಿ 31) 30 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

‘ಮೂವತ್ತು ವರ್ಷಗಳ ಸಾರ್ಥಕ ಪಯಣ’ ಎಂದು ಸುದೀಪ್ ಪತ್ರ ಆರಂಭಿಸಿದ್ದಾರೆ. ‘ಚಿತ್ರರಂಗದಲ್ಲಿ 3 ದಶಕಗಳನ್ನು ಪೂರೈಸಿ ನಿಂತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ಬಂದಿದೆ. ಅಂದು ಕನಸುಗಳು, ಅನುಮಾನಗಳು ಮತ್ತು ಅಪಾರ ಭರವಸೆ ಹೊತ್ತಿದ್ದ ಒಬ್ಬ ಹುಡುಗ ನಾನು. ಅಂದಿನ ಸ್ಥಿತಿಗೂ, ಇಂದು ಬೆಳೆದಿರುವ ರೀತಿ ಊಹಿಸಿದ್ದಕ್ಕಿಂತ ದೊಡ್ಡದಾಗಿದೆ. ಇದಕ್ಕೆ ಕಾರಣ ನೀವು’ ಎಂದು ಸುದೀಪ್ ಧನ್ಯವಾದ ಹೇಳಿದ್ದಾರೆ. ಅದೇ ರೀತಿ ವೃತ್ತಿ ಜೀವನದಲ್ಲಿ ಯಾರ ಪಾತ್ರ ಯಾವ ರೀತಿ ಇದೆ ಎಂಬುದನ್ನು ವಿವರಿಸಿದ್ದಾರೆ ಸುದೀಪ್.

  1. ಅಭಿಮಾನಿಗಳು: ನನ್ನ ಶಕ್ತಿ, ನೀವೇ ನನ್ನ ಪ್ರೇರಣೆ. ನಾನು ಪ್ರತಿದಿನ ಕೆಲಸಕ್ಕೆ ಬರಲು ನೀವೇ ಕಾರಣ.
  2. ನಿರ್ದೇಶಕರು ಮತ್ತು ಬರಹಗಾರರು: ನಿಮ್ಮ ಕಥೆಗಳಿಗೆ ನಾನು ಸರಿ ಹೊಂದುತ್ತೇನೆ ಎಂದು ನಂಬಿ ಜವಾಬ್ದಾರಿ ನೀಡಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.
  3. ನಿರ್ಮಾಪಕರು: ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸಿವೆ.
  4. ಸಹ ಕಲಾವಿದರು ಮತ್ತು ತಂತ್ರಜ್ಞರು: ಸಿನಿಮಾ ಎಂಬುದು ಸಂಘಟಿತ ಕೆಲಸ. ಲೈಟ್ ಬಾಯ್ ಇಂದ ಕ್ಯಾಮೆರಾಮನ್‌ಗಳವರೆಗೆ, ಕಲಾ ತಂಡದಿಂದ ಕಾಸ್ಟ್ಯೂಮ್ ಡಿಸೈನರ್​​ವರೆಗೆ, ಸ್ಪಾಟ್ ಬಾಯ್ಸ್‌ನಿಂದ ಹಿಡಿದು ಎಡಿಟರ್‌ಗಳವರೆಗೆ, ನಿಮ್ಮ ತೆರೆಯ ಹಿಂದಿನ ಶ್ರಮವೇ ಎಲ್ಲದಕ್ಕೂ ಕಾರಣ.
  5. ಮಾಧ್ಯಮ: ನೀವು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದೀರಿ. ನನ್ನನ್ನು ಪ್ರಶ್ನಿಸಿದ್ದೀರಿ, ನನ್ನ ಯಶಸ್ಸನ್ನು ಸಂಭ್ರಮಿಸಿದ್ದೀರಿ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದೀರಿ.
  6. ಕನ್ನಡ ಚಿತ್ರರಂಗ: ನೀವು ನನಗೆ ಗುರುತು, ಹೆಮ್ಮೆ. ಚಿತ್ರರಂಗ ನನಗೆ ನೆಲೆ ನೀಡಿದೆ. ನಾನು ಸದಾ ಕನ್ನಡ ಚಿತ್ರವನ್ನು ನನ್ನ ಹೃದಯದಲ್ಲಿ ಹೊತ್ತು ನಡೆಯುತ್ತೇನೆ.
  7. ನನ್ನ ಕುಟುಂಬ ಹಾಗೂ ಸ್ನೇಹಿತರು: ಈ ಎಲ್ಲಾ ಏರಿಳಿತಗಳ ನಡುವೆ ನನ್ನನ್ನು ಸಾಮಾನ್ಯ ಮನುಷ್ಯನನ್ನಾಗಿ ನೀವು ನೋಡಿದ್ದೀರಿ. ನಾನು ಹೇಗಿದ್ದೇನೋ ಹಾಗೆ ಸ್ವೀಕರಿಸಿದ್ದಕ್ಕೆ ಧನ್ಯವಾದ.

‘ಈ 30 ವರ್ಷಗಳು ನನಗೆ ಒಂದು ಪಾಠ ಕಲಿಸಿದ್ದರೆ ಅದು ‘ಮಾನವೀಯತೆ’. ಪ್ರತಿಯೊಂದು ಗೆಲುವೂ ನಮಗೆ ದಕ್ಕಿದ ಪ್ರಸಾದ. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ, ಕಲೆಯನ್ನು ಗೌರವಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದನ್ನು ಮರಳಿ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ. ಕೈಮುಗಿದು, ಕೃತಜ್ಞತಾ ಭಾವದೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು’ ಎಂದು ಸುದೀಪ್ ಪತ್ರ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:11 pm, Sat, 31 January 26