ಕ್ರಿಕೆಟ್​ ಗ್ರೌಂಡ್​​ನಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯದಲ್ಲಿ ಅವಾಚ್ಯ ಶಬ್ದ ಬಳಕೆ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಜೋಗಿ ಪ್ರೇಮ್ ಇದಕ್ಕೆ ಕಾರಣ ಎಂದಿದ್ದಾರೆ. ಬಿಗ್ ಬಾಸ್ ನಿರೂಪಕ ಸುದೀಪ್ ಕೆಟ್ಟ ಪದ ಬಳಸಿದ್ದಕ್ಕೆ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಕ್ರಿಕೆಟ್​ ಗ್ರೌಂಡ್​​ನಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್
ಸುದೀಪ್

Updated on: Jan 29, 2026 | 3:09 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಿರೂಪಣೆಯನ್ನು ಸುದೀಪ್ (Sudeep) ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಈಗ ಅವರ ಸಂಪೂರ್ಣ ಗಮನ ಕ್ರಿಕೆಟ್ ಮೇಲಿದೆ. ಸಿಸಿಎಲ್​​ನಲ್ಲಿ ಅವರು ಕರ್ನಾಟಕ ಬುಲ್ಡೋಜರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಪಂದ್ಯ ಆಡುವಾಗ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಪದ ಬಳಕೆಗೆ ಜೋಗಿ ಪ್ರೇಮ್ ಕಾರಣ ಎಂದಿದ್ದಾರೆ.

ರಾಜ್ ಬಿ ಶೆಟ್ಟಿ ನಟನೆಯ ‘ರಕ್ಕಸಪೂರದೊಳ್’ ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನಡೆದಿದೆ. ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅತಿಥಿಯಾಗಿದ್ದರು.ಈ ಈವೆಂಟ್​​ನಲ್ಲಿ ಜೋಗಿ ಪ್ರೇಮ್ ಅವರು ಮೊದಲು ಈ ವಿಷಯ ತೆಗೆದರು. ಸುದೀಪ್ ಮಾತಿನ ಮಲ್ಲ. ಹೀಗಾಗಿ, ಅವರು ಕೌಂಟರ್ ಕೊಟ್ಟರು.

ಈ ಮೊದಲು ಜೋಗಿ ಪ್ರೇಮ್ ಅವರು ಏನಾದರೂ ಮಾತನಾಡುವಾಗ ಕೆಟ್ಟ ಪದ ಬಳಕೆ ಮಾಡಿದರೆ ಸುದೀಪ್ ಅದನ್ನು ಪ್ರಶ್ನೆ ಮಾಡುತ್ತಿದ್ದರಂತೆ. ಹಾಗೆಲ್ಲ ಏಕೆ ಮಾತನಾಡಿದೆ ಎಂದು ಕೇಳುತ್ತಿದ್ದರಂತೆ. ಈಗ ಸುದೀಪ್ ಕೂಡ ಬಳಕೆಗೆ ಅರ್ಹವಲ್ಲದ ಶಬ್ದ ಹೇಳಿದ್ದನ್ನು ಕೇಳಿ ಪ್ರೇಮ್​​ಗೆ ಖುಷಿ ಆಗಿದೆ.

‘ನಾನು ಬರುವಾಗ ಒಂದು ವಿಡಿಯೋ ನೋಡಿದೆ. ಇಡೀ ಕರ್ನಾಟಕ ವಿಡಿಯೋ ನೋಡಿದೆ. ಆಗ ಸುದೀಪ್ ಕೆಟ್ಟ ಪದ ಬಳಕೆ ಮಾಡಿದ್ರೆ ಬೈತಿದ್ರು. ಸುದೀಪ್ ಕೂಡ ನಮ್ಮ ರೂಟ್​​​​ಗೆ ಬಂದ್ರಲ್ಲ ಎಂಬುದೇ ಖುಷಿ. ಅವರು ಅದನ್ನು ಹೇಳಿದ ಸ್ಟೈಲ್ ಚೆನ್ನಾಗಿತ್ತು’ ಎಂದಿದ್ದಾರೆ ಪ್ರೇಮ್. ‘ಮೊನ್ನೆ ಏನು ವೈರಲ್ ಆಯ್ತಲ್ಲ ರೀಲ್​ ಅದಕ್ಕೆ ಕಾರಣ ಗುರುಗಳು ಪ್ರೇಮ್. ಸೆಮಿ ಫೈನಲ್ ಅಲ್ಲಿ ಏನಾದರೂ ಬಂದರೆ ಅದಕ್ಕೆ ಕಾರಣನೂ ಪ್ರೇಮ್ ಅವರೇ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೇ ಇಟ್ಟುಕೊಂಡು ಬಡಾಯಿಕೊಚ್ಚಿಕೊಂಡ ಸತೀಶ್

ಸುದೀಪ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಬಿಗ್ ಬಾಸ್​​​ನಲ್ಲಿ ಸುದೀಪ್ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಪಾಠ ಹೇಳುತ್ತಾರೆ, ನಂತರ ಅವರೇ ಆ ರೀತಿಯ ಪದ ಬಳಕೆ ಮಾಡುತ್ತಾರೆ ಎಂದು ಹೇಳಿದ್ದರು. ಒಂದು ಫ್ಯಾಮಿಲಿ ಶೋನಲ್ಲಿ ಕೆಟ್ಟ ಪದ ಬಳಸುವುದಕ್ಕೂ, ಗೆಳೆಯರ ಜೊತೆ ಕ್ರಿಕೆಟ್ ಆಡುವಾಗ ಮಾಡುವ ಪದ ಬಳಕೆಗೂ ಸಾಕಷ್ಟು ವ್ಯತ್ಯಾಸ ಇದೆ. ಇದು ಅನೇಕರಿಗೆ ಅರ್ಥವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.