
ಕಿಚ್ಚ ಸುದೀಪ್ (Kichcha Sudeep) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಆಕ್ಷನ್ ತುಂಬಿರುವ ಟ್ರೈಲರ್ ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸುದೀಪ್ ಅವರು ಒಂದರ ಹಿಂದೊಂದು ಆಕ್ಷನ್-ಥ್ರಿಲ್ಲರ್ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದು, ಸುದೀಪ್ ಅವರ ಹೈಟು, ಪರ್ಸನಾಲಿಟಿ, ಡೈಲಾಗ್ನ ಗತ್ತು ಆಕ್ಷನ್ ಸಿನಿಮಾಗಳಿಗೆ ಅದ್ಭುತವಾಗಿ ಸೂಟ್ ಆಗಿದೆ. ಆದರೆ ಸುದೀಪ್ ಚಿತ್ರರಂಗಕ್ಕೆ ಬಂದಿದ್ದು ಆಕ್ಷನ್ ಹೀರೋ ಆಗಿ ಅಲ್ಲ ಬದಲಿಗೆ ರೊಮ್ಯಾಂಟಿಕ್ ಹೀರೋ ಆಗಿ. ಆದರೆ ಕಳೆದ ಹಲವು ವರ್ಷಗಳಿಂದ ರೊಮ್ಯಾಂಟಿಕ್ ಸಿನಿಮಾಗಳತ್ತ ಮುಖವನ್ನೇ ಮಾಡಿಲ್ಲ ಸುದೀಪ್, ಆದರೆ ಈಗ ಅಂಥಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
‘ಸ್ಪರ್ಷ’ದಂಥಹಾ ಅದ್ಭುತ ಪ್ರೇಮಕತೆಯ ಮೂಲಕ ನಾಯಕ ನಟರಾದ ಸುದೀಪ್, ಆರಂಭದ ದಿನಗಳಲ್ಲಿ ಹೆಚ್ಚು ನಟಿಸಿದ್ದು ಪ್ರೇಮಕಥಾ ಸಿನಿಮಾಗಳಲ್ಲಿಯೇ. ಮಾತ್ರವಲ್ಲದೆ ಹ್ಯಾಂಡ್ಸಮ್ ಹೀರೋ ಆಗಿದ್ದ ಸುದೀಪ್ ಅವರನ್ನು ಹೆಚ್ಚು ಹೆಚ್ಚು ಪ್ರೇಮಕಥಾ ಸಿನಿಮಾಗಳಿಗೆ ನಿರ್ದೇಶಕರು ಬಳಸಿಕೊಂಡರು. ಸುದೀಪ್ ಅವರು ಹಲವು ಅದ್ಭುತ ಪ್ರೇಮಕಥಾ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ‘ಹುಚ್ಚ’, ‘ಚಂದು’, ‘ನಲ್ಲ’, ‘ಮೈ ಆಟೊಗ್ರಾಫ್’, ‘ಮುಸ್ಸಂಜೆ ಮಾತು’, ‘ಜಸ್ಟ್ ಮಾತ್ ಮಾತಲ್ಲಿ’ ಇನ್ನೂ ಹಲವಾರು ಪ್ರೇಮಕಥಾ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ.
ಆದರೆ ಕಳೆದ ಕೆಲವಾರು ವರ್ಷಗಳಿಂದ ಸುದೀಪ್ ಅವರು ಒಂದು ಅಪ್ಪಟ ರಾಮ್-ಕಾಮ್ ಸಿನಿಮಾನಲ್ಲಿ ನಟಿಸಿಯೇ ಇಲ್ಲ. ಆದರೆ ಈಗ ಸುದೀಪ್ ಮತ್ತೊಮ್ಮೆ ರಾಮ್-ಕಾಮ್ ಕತೆಯೊಂದಕ್ಕೆ ಕೈ ಹಾಕಿದ್ದಾರೆ. ‘ಮಾರ್ಕ್’ ಸಿನಿಮಾದ ಪ್ರಚಾರದಲ್ಲಿರುವ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ‘ಬಹಳ ವರ್ಷಗಳ ನಂತರ ಒಂದು ಒಳ್ಳೆಯ ಪ್ರೇಮಕಥಾ ಸಿನಿಮಾ ಮಾಡಲು ಮುಂದಾಗಿದ್ದೀನಿ. ಕತೆ ಈಗಾಗಲೇ ಕೇಳಿದ್ದು, ಕತೆ ಅದ್ಭುತವಾಗಿದೆ. ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿ ಆಗಿದೆ, ಚಿತ್ರೀಕರಣ ಪ್ರಾರಂಭ ಆಗಲಿದೆ’ ಎಂದಿದ್ದಾರೆ. ಸಿನಿಮಾದ ಕತೆ ಒಪ್ಪಿರುವುದಾಗಿ ಹೇಳಿರುವ ಸುದೀಪ್, ಸಿನಿಮಾ ನಿರ್ದೇಶನ ಮಾಡುತ್ತಿರುವುದು ಯಾರು ಇತ್ಯಾದಿ ಮಾಹಿತಿಗಳನ್ನು ಹಂಚಿಕೊಂಡಿಲ್ಲ.
ಸುದೀಪ್ ಅವರ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಸುದೀಪ್ ಅವರ ಈ ಹಿಂದಿನ ಸಿನಿಮಾ ‘ಮ್ಯಾಕ್ಸ್’ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ’ ಸಿನಿಮಾವನ್ನೂ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಸತ್ಯಜ್ಯೋತಿ ಫಿಲಮ್ಸ್ ಮತ್ತು ಕಿಚ್ಚ ಸುದೀಪ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ಇತರೆ ಕೆಲವು ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ಮಲಯಾಳಂ ನಟ ಶೈನ್ ಟಾಮ್ ಚಾಕೊ, ತಮಿಳಿನ ಯೋಗಿ ಬಾಬು, ತೆಲುಗಿನ ವಿಕ್ರಂ ಚಂದ್ರ, ನಟಿಯರಾದ ರೋಷಿನಿ ಪ್ರಕಾಶ್, ನಿಶ್ವಿಕಾ ನಾಯ್ಡು ಅವರುಗಳು ನಟಿಸಿದ್ದಾರೆ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ