ರೇಣುಕಾಸ್ವಾಮಿ ಕೇಸ್: ಎ1 ಪವಿತ್ರಾ ಗೌಡ ಇರುವ ಸೆಲ್ಗೆ ಟಿವಿ ನೀಡಲು ಕೋರ್ಟ್ ಸೂಚನೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆ ಇಂದಿನಿಂದ (ಡಿಸೆಂಬರ್ 17) ಆರಂಭ ಆಗಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ರೇಣುಕಾಸ್ವಾಮಿ ತಂದೆ, ತಾಯಿ ವಿಚಾರಣೆಗೆ ಹಾಜರಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ದರ್ಶನ್, ಪವಿತ್ರಾ ಗೌಡ ಅವರು ಕೋರ್ಟ್ ಕಲಾಪ ವೀಕ್ಷಣೆ ಮಾಡಿದ್ದಾರೆ.

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ. ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ (Darshan) ಮುಂತಾದವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಪವಿತ್ರಾ ಗೌಡ ಪರವಾಗಿ ಬಾಲವ್ ವಾದ ಮಾಡಿದ್ದಾರೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಇಂದು (ಡಿ.17) ವಿಚಾರಣೆ ಆರಂಭ ಆಯಿತು. ಟಿವಿ, ರೇಡಿಯೋ, ದಿನಪತ್ರಿಕೆ, ಮ್ಯೂಸಿಕ್, ಮೆಡಿಟೇಷನ್ ಹಾಗೂ ಮನೆ ಊಟ ಬೇಕು ಎಂದು ಪವಿತ್ರಾ ಗೌಡ (Pavithra Gowda) ಪರವಾಗಿ ವಕೀಲರು ಮನವಿ ಮಾಡಿದ್ದಾರೆ.
ಪವಿತ್ರಾ ಗೌಡ ಇರುವ ಸೆಲ್ಗೆ ಟಿವಿ ಅಳವಡಿಸಲು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸೂಚನೆ ನೀಡಿದ್ದಾರೆ. ಆರೋಪಿಗೆ ದಿನಪತ್ರಿಕೆ, ಗ್ರಂಥಾಲಯದ ಪುಸ್ತಕ ಒದಗಿಸಲೂ ಸೂಚಿಸಲಾಗಿದೆ. ಈ ಮೊದಲು ನಟ ದರ್ಶನ್ ಇರುವ ಸೆಲ್ಗೂ ಟಿವಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಪವಿತ್ರಾ ಗೌಡ ಅವರಿಗೆ ಟಿವಿ ಭಾಗ್ಯ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಟ್ರಯಲ್ ಆರಂಭ ಆಗಿದೆ. ಇಂದು (ಡಿಸೆಂಬರ್ 17) ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಮತ್ತು ತಾಯಿ ರತ್ನಪ್ರಭ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಅಪಹರಣ ನಡೆದ ದಿನ ಏನೆಲ್ಲ ಆಯಿತು ಎಂಬುದರ ಬಗ್ಗೆ ಅವರಿಬ್ಬರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಆರೋಪಿಗಳ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಿದರು.
ಜೂ.8ರ ಬಳಿಕ ಮಗನ ಮೊಬೈಲ್ ನೋಡಿದ್ರಾ? ಬೆಳಗ್ಗೆ ನಿಮ್ಮ ಮನೆಯಲ್ಲಿ ಟಿಫಿನ್ ಮಾಡಿದ್ನಾ? ರೇಣುಕಾಸ್ವಾಮಿ ಸ್ನೇಹಿತರೊಂದಿಗೆ ಬಾಲಾಜಿ ಬಾರ್ಗೆ ಊಟಕ್ಕೆ ಹೋಗಿದ್ರಾ? ನಿಮ್ಮ ಮಗ ಎಲ್ಲಿ ಹೋದ ಎಂದು ಸ್ನೇಹಿತರನ್ನು ವಿಚಾರಿಸಿದ್ರಾ? ನೀಲಿ ಜೀನ್ಸ್, ಕೈಗಡಿಯಾರ ಧರಿಸಿದ್ದನ್ನು ಪೊಲೀಸರಿಗೆ ಹೇಳಿದ್ದಿರಾ? ಶವಾಗಾರದಲ್ಲಿ ರೇಣುಕಾಸ್ವಾಮಿ ಧರಿಸಿದ್ದ ಟಿ-ಶರ್ಟ್ ನೋಡಿದ್ದೀರಾ ಎಂಬಿತ್ಯಾದಿ ಪ್ರಶ್ನೆಗಳನ್ನು ರೇಣುಕಾಸ್ವಾಮಿ ಪೋಷಕರಿಗೆ ಕೇಳಲಾಯಿತು.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ
2024ರ ಜೂನ್ 9ರಂದು ನಿಮ್ಮ ಮಗ ಕೆಎಸ್ಆರ್ಟಿಸಿ ಬಸ್ ಹತ್ತಿ ಹೋಗಿದ್ದು ನಿಮಗೆ ಗೊತ್ತಿತ್ತಾ? ನಿಮ್ಮ ಮಗ ಕೆಲಸಕ್ಕೆ ಹೋಗುವಾಗ ಯೂನಿಫರ್ಮ್ ಹಾಕುತ್ತಿರಲಿಲ್ಲವಾ ಎಂದು ಕೂಡ ಪ್ರಶ್ನೆ ಕೇಳಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ದರ್ಶನ್ ಅವರು ಪ್ರಕ್ರಿಯೆ ವೀಕ್ಷಣೆ ಮಾಡಿದ್ದಾರೆ. ಪವಿತ್ರಾ ಗೌಡ ಕೂಡ ಕುತೂಹಲದಿಂದ ಕೋರ್ಟ್ ಕಲಾಪ ವೀಕ್ಷಿಸಿದ್ದಾರೆ. ಗುರುವಾರ (ಡಿಸೆಂಬರ್ 18) ಮಧ್ಯಾಹ್ನ12 ಗಂಟೆಗೆ ವಿಚಾರಣೆ ಮುಂದೂಡಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



